

ಹಾವೇರಿ: ಹಾನಗಲ್ಲ ತಾಲೂಕಿನ ಅಕ್ಕಿಆಲೂರ ಸುತ್ತಮುತ್ತ ಹಲವು ರೈತರಿಗೆ ಮೆಣಸಿನಕಾಯಿಯ ಕಳಪೆ ಬೀಜ ನೀಡಿ ಮೆಣಸಿಕಾಯಿ ಫಸಲು ಬಾರದಿರಲು ಕಾರಣವಾಗಿರುವ ದಂಧೆಕೋರರು ಹಾವೇರಿ ತಾಲೂಕಿನಲ್ಲೂ ಕೈಚಳಕ ತೋರಿದ್ದಾರೆ. ತಾಲೂಕಿನ ಕುಳೇನೂರ ಭಾಗದಲ್ಲೂ ಬೆಳೆ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾಲೂಕಿನ ಕುಳೇನೂರ ಗ್ರಾಮದ ಪ್ರಕಾಶ ಹಾವೇರಿ, ರಾಜಶೇಖರ ಹೊನ್ನತ್ತಿ, ಫಕ್ಕೀರೇಶಪ್ಪ ಕಳ್ಳಿ, ಮಲ್ಲೇಶಪ್ಪ ಕಳ್ಳಿ, ಗಿರಿಮಲ್ಲಪ್ಪ ಕಮ್ಮಾರ ಸೇರಿದಂತೆ ಹಲವು ರೈತರು 30ಕ್ಕೂ ಅಧಿಕ ಎಕರೆ ಹೊಲದಲ್ಲಿ ಈ ಮೆಣಸಿನಕಾಯಿ ಬೀಜ ಹಾಕಿದ್ದರು. ಮಳೆ ಬಾರದಿದ್ದರೂ ಬೋರ್‌ವೆಲ್ ಮೂಲಕ ನೀರುಣಿಸಿ ಪೋಷಣೆ ಮಾಡಿದ್ದರು. ಸಸಿ ಚೆನ್ನಾಗಿ ಬೆಳೆದು ಇನ್ನೇನು ಕಾಯಿ ಬಿಡಬೇಕು ಎಂದು ಕಾದು ಕುಳಿತ ರೈತರಿಗೆ ನಿರಾಸೆಯಾಗಿದೆ. ಎಷ್ಟು ಕಾದರೂ ಕಾಯಿ ಬಿಡುತ್ತಲೇ ಇಲ್ಲ. ಹಾಗಾಗಿ, ಬೀಜ ನೀಡಿದ ಕಂಪನಿ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಪರಿಹಾರ ದೊರಕಿಸಿಕೊಡುವಂತೆ ತೋಟಗಾರಿಕೆ ಇಲಾಖೆಗೆ ಆಗ್ರಹಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬಾಗಲಕೋಟೆಯ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿಕೊಂಡು ಹೋಗಿದ್ದಾರೆ. ತಜ್ಞರ ವರದಿಗಾಗಿ ತೋಟಗಾರಿಕೆ ಇಲಾಖೆ ಕಾಯುತ್ತಿದೆ. ತಪ್ಪಿತಸ್ಥ ಕಂಪನಿಗೆ ಶಿಕ್ಷೆಯಾಗಬೇಕು. ನಷ್ಟ ಅನುಭವಿಸಿದ ರೈತರಿಗೆ ಬಡ್ಡಿಸಮೇತ ಪರಿಹಾರ ಕೊಡಿಸಬೇಕು ಎನ್ನುವುದು ರೈತರ ಒತ್ತಾಯವಾಗಿದೆ.
ಕೋಟ್:
ದಿವ್ಯ ಶಕ್ತಿ 42 ಎಂಬ ಕಂಪನಿಯ ಮೆಣಸಿನಕಾಯಿ ಬೀಜದ ಕುರಿತು ಕುಳೇನೂರ ಭಾಗದಲ್ಲಿ ದೂರು ಬಂದಿದ್ದರಿಂದ ಬಾಗಲಕೋಟೆ ತೋಟಗಾರಿಕೆ ವಿವಿ ವಿಜ್ಞಾನಿಗಳು ಬಂದು ಪರಿಶೀಲಿಸಿದ್ದಾರೆ. ದೇವಿಹೊಸೂರಿನಿಂದ ಒಂದು ವರದಿ ಕಳುಹಿಸಲಾಗಿದೆ. ವಿಜ್ಞಾನಿಗಳಿಂದ ವರದಿ ಬಂದ ಕೂಡಲೇ ಕಂಪನಿಯ ತಪ್ಪು ಇದ್ದರೆ ಇಲಾಖೆಯಿಂದ ಸೂಕ್ತ ಕ್ರಮ ಜರುಗಿಸಲಾಗುವುದು.
ಇಮ್ತಿಯಾಜ್ ಚಂಗಾಪುರ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
ಪ್ಯಾಕೆಟ್ ಮೇಲಿಲ್ಲ ವಿವರಣೆ
ಹಗಿ ಹಚ್ಚಿದ ಮೇಲೆ ಕಾಯಿ ಸರಿಯಾಗಿ ಬಿಟ್ಟಿಲ್ಲ. ತೀರಾ ಕಡಿಮೆ ಕಾಯಿ ಬಿಟ್ಟಿವೆ. ಕಂಪನಿಯವರು ಪ್ಯಾಕೆಟ್ ಮೇಲೆ ಈ ಬೀಜ ಯಾವ ಸೀಸನ್‌ಗೆ ಸೂಕ್ತ ಎಂದು ವಿವರಣೆ ಬರೆದಿಲ್ಲ. ಇದು ಕೂಡ ಕಂಪನಿಯ ತಪ್ಪುಗಳಲ್ಲಿ ಒಂದಾಗಲಿದೆ ಎನ್ನುತ್ತಾರೆ ತಜ್ಞರು.