

ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಅ.13ರಂದು ಹುಬ್ಬಳ್ಳಿಯ ಗಬ್ಬೂರ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ ನಿರಂತರ ಹೋರಾಟದ ಫಲವಾಗಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ 2ಡಿ ಮೀಸಲಾತಿ ಘೋಷಿಸಿತ್ತು. ಚುನಾವಣೆ ಸಂದರ್ಭ ಎಂದು ಒಪ್ಪಿಕೊಂಡೆವು. ಆದರೆ, ಮರುದಿನವೇ ಚುನಾವಣೆ ನೀತಿ ಸಂಹಿತೆ ಜಾರಿಯಾಯಿತು. ನಂತರ ಕೆಲವರು ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದರು ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದೆವು. ಬಜೆಟ್ ಅಧಿವೇಶನದ ಬಳಿಕ ಸಭೆ ಕರೆಯುವುದಾಗಿ ಹೇಳಿದ್ದ ಸಿಎಂ ಮರೆತುಬಿಟ್ಟರು. ಹಾಗಾಗಿ, ಮತ್ತೆ ಹಕ್ಕೊತ್ತಾಯ ಮಂಡಿಸಲು ಶಾಂತಿಯುತ ಹೋರಾಟ ಆರಂಭಿಸಿದ್ದೇವೆ. 6ನೇ ಹಂತದ ಹೋರಾಟ ಬೆಳಗಾವಿಯಿಂದ ಶುರುವಾಗಿದ್ದು, ಈಗಾಗಲೇ ನಿಪ್ಪಾಣಿ, ಜಮಖಂಡಿ, ವಿಜಯಪುರ ಜಿಲ್ಲೆಯ ಝಳಕಿ ಚೆಕ್‌ಪೋಸ್ಟ್‌ನಲ್ಲಿ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಮಾಡಲಾಗಿದೆ. ಅ.13ರಂದು ಹುಬ್ಬಳ್ಳಿಯ ಗಬ್ಬೂರಿನಲ್ಲಿ, ನಂತರ ಗದಗ, ದಾವಣಗೆರೆ ಹಾಗೂ ನ.21ರಿಂದ 26ರವರೆಗೆ ಹಾವೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಲಿಂಗಾಯತ ಕೂಡಲಸಂಗಮ ಪೀಠದ ಜಿಲ್ಲಾಧ್ಯಕ್ಷ ಬಸವರಾಜ ಹಾಲಪ್ಪನವರ, ತಾಲೂಕಾಧ್ಯಕ್ಷ ಬಸವರಾಜ ಗಡೇಕರ, ಸಿ.ಆರ್.ಬಳ್ಳಾರಿ, ದಾನೇಶಪ್ಪ ಕೆಂಗೊಂಡ, ಶಿವಲಿಂಗಪ್ಪ ಸಾತೇನಹಳ್ಳಿ, ಎ.ಬಿ.ಪಾಟೀಲ, ಜಗದೀಶ ಕನವಳ್ಳಿ, ಸುಭಾಷ ಹಿರೇತನ, ಹೇಮಾ ಪಾಟೀಲ, ಗೀತಾ ಪೂಜಾರ, ಇತರರಿದ್ದರು.
ಶಾಸಕರಿಗೆ ಒತ್ತಾಯ ಮಾಡಲ್ಲ
ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಯಾವ ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ಒತ್ತಾಯ ಮಾಡಲ್ಲ. ಈಗತಾನೆ ಸರ್ಕಾರ ರಚನೆಯಾಗಿದೆ. ಸಮಯ ಸಿಕ್ಕಾಗ ಬನ್ನಿ. ಇಲ್ಲದ್ದಿದ್ದರೆ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿ ಎಂದು ಹೇಳಿದ್ದೇನೆ. ಆದರೂ ಕೆಲವರು ಭಾಗವಹಿಸುತ್ತಿದ್ದಾರೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಶೈಲಿಯೇ ಬೇರೆ, ಇತರರ ಶೈಲಿಯೇ ಬೇರೆ. ಇತರರು ಸರ್ಕಾರ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ ಎಂದು ಶ್ರೀಗಳು ವಿವರಿಸಿದರು.