

ಹಾವೇರಿ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.31ರಿಂದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ವತಿಯಿಂದ ಮುಷ್ಕರ ಆರಂಭಿಸಲಾಗುವುದು. ಎಲ್ಲ ಸಾರಿಗೆ ಸಂಚಾರ ಬಂದ್ ಮಾಡಿ ಪ್ರತಿಭಟಿಸಲಾಗುವುದು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿ ಚಲೋ ಹೋರಾಟದ ಸಂದರ್ಭದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಸಾರಿಗೆ ನೌಕರರ ಮನವಿ ಸ್ವೀಕರಿಸಿ, ಬೇಡಿಕೆಗಳ ಈಡೇರಿಕೆ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಬಗೆಹರಿಸಲು ಯತ್ನಿಸಲಾಗುವುದು ಎಂದಿದ್ದರು. ಈ ವರೆಗೆ ಈ ಬಗ್ಗೆ ಚಕಾರ ಎತ್ತಿಲ್ಲ. ಹಾಗಾಗಿ, ಮುಷ್ಕರ ಮಾಡಲು ಮುಂದಾಗಿದ್ದೇವೆ. ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಹೆಸರು ತಂದುಕೊಟ್ಟಿದೆ. ಹಲವು ಸಮಸ್ಯೆಗಳ ನಡುವೆಯೂ ನೌಕರರು ದುಡಿಯುತ್ತಿದ್ದಾರೆ.
38 ತಿಂಗಳ ಬಾಕಿ ಹಣ, ಜನವರಿ 2024ರಿಂದ ಹೊಸ ವೇತನ ಜಮೆ ಮಾಡುವುದು ಸೇರಿ, ಇತರ ಬೇಡಿಕೆಗಳನ್ನು ಈಡೇರಿಸಬೇಕು. ಡಿ.31ರೊಳಗೇ ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ಅನಿವಾರ್ಯ. ಎಲ್ಲ ಸಾರಿಗೆ ನೌಕರರು ಮುಷ್ಕರಕ್ಕೆ ಕೈಜೋಡಿಸಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯ ಹಾವೇರಿ ವಿಭಾಗದ ಅಧ್ಯಕ್ಷ ಎಂ.ಎಸ್.ಪವಾರ ಹಾಗೂ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಯೂನಿಯನ್‌ನ ಹಾವೇರಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜೆಟ್ಟಿ ರಾಜಶೇಖರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.