ಸೌಜನ್ಯ ಪ್ರಕರಣದ ತನಿಖೆಗೆ ಆಗ್ರಹಿಸಿ ಪಾದಯಾತ್ರೆ

KRS Logo
Published on

ಹಾವೇರಿ: ಧರ್ಮಸ್ಥಳದ ಸೌಜನ್ಯ ಸಾವಿನ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್)ದ ವತಿಯಿಂದ ಆ.26ರಿಂದ ಬೆಳ್ತಂಗಡಿಯಿಂದ ಬೆಂಗಳೂರವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ ಜಿಲ್ಲೆಯ ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ವಿಶ್ವನಾಥ ರೆಡ್ಡೇರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012ರಲ್ಲಿ ನಡೆದ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ. ಪೊಲೀಸರ ತನಿಖೆ ಕುರಿತು ಜನ ಬೇಸತ್ತಿದ್ದಾರೆ. ಬಡವರಿಗೆ, ದುರ್ಬಲರಿಗೆ ನ್ಯಾಯ ಸಿಗುವುದಿಲ್ಲ ಎನ್ನುವ ಅಭಿಪ್ರಾಯ ಮೂಡಿದೆ. ಈ ಹಿನ್ನೆಲೆಯಲ್ಲಿ ಸೌಜನ್ಯ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. 14 ದಿನಗಳ ಕಾಲ ಒಟ್ಟು 330 ಕಿ.ಮೀ. ಕ್ರಮಿಸಲಾಗುವುದು ಎಂದರು.
ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣ ತನಿಖೆ ನಡೆಸಿ ಪೂರ್ಣಗೊಳಿಸಬೇಕು. ಮಕ್ಕಳು, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಮಾನವ ಕಳ್ಳಸಾಗಣೆ ಜಾವನ್ನು ಭೇದಿಸಬೇಕು ಎಂಬಿತ್ಯಾದಿ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದರು.
ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಬೇದ್ರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕಾಡಶೆಟ್ಟೇರ, ಗಂಗಾ ಕೋರಿ, ಹಾಲೇಶ ಕುರುವತ್ತಿ, ಎನ್.ಬಿ. ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net