ಲೋಕಸಭೆಗೆ ಕೆಆರ್‌ಎಸ್ ಸ್ಪರ್ಧೆ; ಆಕಾಂಕ್ಷಿಗಳಿಗೆ ಬೆಂಗಳೂರಲ್ಲಿ ಸಂದರ್ಶನ

KRS Logo
Published on

ಹಾವೇರಿ: ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ 28 ಸ್ಥಾನಗಳಲ್ಲೂ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಆಕಾಂಕ್ಷಿಗಳಿಗೆ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಜ.6, 7ರಂದು ಸಂದರ್ಶನ ನಡೆಯಲಿದೆ ಎಂದು ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕಾಡಶೆಟ್ಟಿಹಳ್ಳಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ನಮ ಪಕ್ಷದಿಂದ ಸ್ಪರ್ಧಿಸಲು ಆಸಕ್ತಿ ಹೊಂದಿದವರು ಸಂದರ್ಶನದಲ್ಲಿ ಹಾಜರಾಗಬಹುದು. ಸಂದರ್ಶನದ ಬಳಿಕ ರಾಜ್ಯ ಸಮಿತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ ಎಂದರು.
ವಿಧಾನಸಭೆ ಚುನಾವಣೆಯಲ್ಲಿ 195 ಕ್ಷೇತ್ರಗಳಲ್ಲಿ ಸೋಲು ಕಂಡರೂ ಸಮಾಜದಲ್ಲಿ ಅನ್ಯಾಯದ ವಿರುದ್ಧ ಪಕ್ಷ ಹೋರಾಡುತ್ತಲೇ ಇದೆ. ಭ್ರಷ್ಟಾಚಾರದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುವ ಮೂಲಕ ಜನರ ಧ್ವನಿಯಾಗಿದೆ. ಈ ಹೋರಾಟ ನಿರಂತರವಾಗಿ ಇರಲಿದೆ. ಇದರ ಭಾಗವಾಗಿ ಲೋಕಸಭೆ ಚುನಾವಣೆ ಎದುರಿಸಲು ಪಕ್ಷ ಸನ್ನದ್ಧವಾಗಿದೆ ಎಂದರು.
ಜಿಲ್ಲಾ ಕಾರ್ಯದರ್ಶಿ ಗಂಗಮ್ಮ ಕೋರಿ, ಜಿಲ್ಲಾ ಜಂಟಿ ಕಾರ್ಯದರ್ಶಿ ನಾಗನಗೌಡ್ರ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಚರಣರಾಜ ರೊಡ್ಡನವರ, ತಾಲೂಕು ಅಧ್ಯಕ್ಷ ಜಯಕೃಷ್ಣ ರೆಡ್ಡಿ, ಮಂಜುನಾಥ ಮಿರಜಕರ, ವೀರೇಶ ಹಡಪದ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net