

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರನೇ ವೇತನ ಆಯೋಗದ ಎಲ್ಲ ಶಿಪಾರಸ್ಸುಗಳನ್ನು ಯಥಾವತ್ತಾಗಿ ಜಾರಿಗೊಳಿಸಿದ್ದಾರೆ. ಅಲ್ಲದೇ ಅವರ ಹಿಂದಿನ ಅವಧಿಯಲ್ಲಿ ಲಕ್ಷಗಟ್ಟಲೇ ಉದ್ಯೋಗ ಸೃಷ್ಠಿಸಿ ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ನೀಡಿದ್ದಾರೆ. ಎಲ್ಲ ಫಲಾನುಭವಿ ಶಿಕ್ಷಕರು ಮತ್ತು ಪದವೀಧರರು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಋಣ ತಿರಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪದವೀಧರರ ಘಟಕದ ಅಧ್ಯಕ್ಷ ಡಾ.ಆರ್.ಎಂ.ಕುಬೇರಪ್ಪ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕಳೆದ ಹತ್ತಾರು ವರ್ಷಗಳಿಂದ ಶಿಕ್ಷಕರು ಹಾಗೂ ಪದವೀಧರರಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ. ಹಲವು ವರ್ಷಗಳಿಂದ ರಾಜ್ಯದ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇದ್ದ ಹುದ್ದೆಗಳನ್ನು ತುಂಬಲು ಅನುಮತಿ ನೀಡಿದ್ದರಿಂದ ಪಿಎಚ್‌ಡಿ ಪಡೆದು ನಿರುದ್ಯೋಗಿ ಆಗಿದ್ದ ಸಾವಿರಾರು ಯುವಕರಿಗೆ ಉದ್ಯೋಗದ ಅವಕಾಶ ದೊರೆತಿದೆ ಎಂದರು.
ಕಾಂಗ್ರೆಸ್ ಸರ್ಕಾರ ನಿರುದ್ಯೋಗಿ ಪದವೀಧರಿಗೆ ತಿಂಗಳಿಗೆ ಮೂರು ಸಾವಿರ ರೂ., ಡಿಪ್ಲೊಮಾ ಪದವೀಧರರಿಗೆ ಹದಿನೈದು ನೂರು ರೂ. ಪ್ರತಿ ತಿಂಗಳು ನೀಡುತ್ತಿದೆ. ಇತ್ತೀಚೆಗೆ ಅತಿಥಿ ಉಪನ್ಯಾಸಕರು ಮಾಡಿದ ಹೋರಾಟಕ್ಕೆ ಸ್ಪಂದಿಸಿ ಎಲ್ಲ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿ ವೇತನ ಹೆಚ್ಚಿಸಿದ್ದಾರೆ. ಅವರಿಗೆ ಆರೋಗ್ಯ ವಿಮೆ ಜಾರಿಗೊಳಿಸಿ, ನಿವೃತ್ತಿಯಾದಾಗ ಪ್ರತಿಯೊಬ್ಬರಿಗೂ 5 ಲಕ್ಷ ರೂ, ಇಡಿಗಂಟು ನೀಡುವುದಾಗಿ ಆದೇಶ ಮಾಡಿದ್ದಾರೆ. ಈಗಾಗಲೇ ಏಳನೇ ವೇತನ ಆಯೋಗದ ಶಿಪಾರಸ್ಸಿನ ಅನ್ವಯ ಮಧ್ಯಂತರ ಪರಿಹಾರ ಘೋಷಿಸಿದ್ದು, ಅತೀ ಶೀಘ್ರದಲ್ಲಿ ಏಳನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಜಾರಿಗೊಳಿಸಲಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಉತ್ಸಾಹಿ ಯುವಕರಿದ್ದು, ಶಿಕ್ಷಕರು ಹಾಗೂ ಪದವೀಧರರ ಪರವಾಗಿ ಕೆಲಸ ಮಾಡಲಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಬೆಂಬಲಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಲಕ್ಷ್ಮಣ ಲಮಾಣಿ, ಎಸ್.ಎಚ್.ಹುಚ್ಚಗೊಂಡರ, ಈರಪ್ಪ ಲಮಾಣಿ, ಇತರರಿದ್ದರು.
ಚುನಾವಣೆ ಬಳಿಕ ನಿರ್ಧಾರ
ಜಿಲ್ಲೆಗೊಂದು ವಿಶ್ವವಿದ್ಯಾಲಯ ಹಾಗೂ ಎನ್‌ಇಪಿಯನ್ನು ಬಿಜೆಪಿ ಜಾರಿಗೊಳಿಸುವಾಗಲೇ ಕಾಂಗ್ರೆಸ್ ವಿರೋಧಿಸಿತ್ತು. ಇದನ್ನು ಮುಂದುವರೆಸಬೇಕೋ, ಬೇಡವೋ ಎಂಬ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿ ವರದಿ ಬರುವುದು ತಡವಾಯಿತು. ಈ ವರದಿ ಆಧಾರದಲ್ಲಿ ಕೆಲ ನಿರ್ಧಾರಗಳನ್ನು ಚುನಾವಣೆ ನಂತರ ಪ್ರಕಟಿಸಲಿದೆ ಎಂದು ಕುಬೇರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.