ಚೆನ್ನೂರ ಸ್ಮಶಾನದ ತಡೆಗೋಡೆ ನಿರ್ಮಿಸಲು ಮನವಿ; ಕೊರಡೂರ ಕೆರೆಗೆ ಒಡ್ಡು ಕಟ್ಟಿಸಲು ಜಿಪಂ ಸಿಇಒಗೆ ಗ್ರಾಮಸ್ಥರ ಒತ್ತಾಯ

7 HVR 2
Published on

ಹಾವೇರಿ: ತಾಲೂಕಿನ ಚೆನ್ನೂರು ಗ್ರಾಮದ ಸ್ಮಶಾನದ ತಡೆಗೋಡೆ ನಿರ್ಮಾಣ ಹಾಗೂ ಕೊರಡೂರ ಗ್ರಾಮದ ಕರೆಕಟ್ಟಿ ಕೆರೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಇತ್ತೀಚೆಗೆ ಜಿಪಂ ಅಪರ ಕಾರ್ಯದರ್ಶಿ ಪುನೀತ್ ಮೂಲಕ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಚೆನ್ನೂರು ಗ್ರಾಮದ ಸ್ಮಶಾನದ ತಡೆಗೋಡೆ ಕೊಚ್ಚಿಕೊಂಡು ಹೋಗಿದೆ. ಇದರಿಂದ ಸ್ಮಶಾನಕ್ಕೆ ಹೋಗಲು ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ತಕ್ಷಣ ತಡೆಗೋಡೆ ನಿರ್ಮಾಣ ಮಾಡಬೇಕು.

ಕೊರಡೂರ ಗ್ರಾಮದಿಂದ ಇಚ್ಚಂಗಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಕಿತ್ತೂರು ಗ್ರಾಮದ ಸರಹದ್ದಿನಲ್ಲಿ ಇರುವ ಕರೆಕಟ್ಟಿ ಕೆರೆಯ ವಡ್ಡು ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದ ಒಡೆದು ಕೆರೆಯಲ್ಲಿದ್ದ ನೀರು ಪೋಲಾಗುತ್ತಿದೆ. ಆದ್ದರಿಂದ ತಕ್ಷಣ ಕೆರೆ ಒಡ್ಡು ಹಾಕಿ, ಪಿಚ್ಚಿಂಗ್ ಕಟ್ಟಿ ನೀರು ನಿಲ್ಲುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ನೆಗಳೂರು ಜಿಪಂ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ಎನ್.ಕೆ.ಮರೋಳ, ಕೆ.ಸಿ.ಕೋರಿ, ಮಂಜು ದೊರೆ, ಪ್ರಲ್ಹಾದ ಪಾಟೀಲ, ರವಿ ಸವಣೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net