ವರದಾ ನದಿಯಲ್ಲಿ ಶ್ರೀ ಸಿದ್ದಾರೂಢರ ತೆಪ್ಪೋತ್ಸವ ; ಕೋಣನತಂಬಗಿ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರೆಯ ವೈಭವ

20 HVR 2
Published on

ಹಾವೇರಿ: ತಾಲೂಕಿನ ಸುಕ್ಷೇತ್ರ ಕೋಣನತಂಬಗಿ ಗ್ರಾಮದ ಶ್ರೀ ಕಲ್ಮೇಶ್ವರ ಮತ್ತು ಶ್ರೀ ಸಿದ್ಧಾರೂಢ ಸ್ವಾಮಿಯವರ ಜಾತ್ರೆಯ ಅಂಗವಾಗಿ ಗ್ರಾಮದ ವರದಾ ನದಿಯಲ್ಲಿ ಸೋಮವಾರ ವಿಶೇಷವಾದ ತೆಪ್ಪೋತ್ಸವ ಸಮಾರಂಭ ನಡೆಯಿತು.
ಪಶ್ಚಿಮ ವಾಹಿನಿ ಎಂದೇ ಪ್ರಸಿದ್ಧವಾಗಿರುವ ಕೋಣನತಂಬಗಿ ಗ್ರಾಮದ ಶ್ರೀ ಕಲ್ಮೇಶ್ವರ ಹಾಗೂ ಶ್ರೀ ಸಿದ್ಧಾರೂಢರ ತೆಪ್ಪೋತ್ಸವ ಅದ್ಧೂರಿಯಾಗಿ ಜರುಗಿತು. ಜಾತ್ರೆಯ ಅಂಗವಾಗಿ ಏಳು ದಿನಗಳ ಕಾಲ ಭಕ್ತರು ನಿರಂತರವಾಗಿ ‘ಓಂ ನಮ ಶಿವಾಯ’ ಪಂಚಾಕ್ಷರಿ ಮಂತ್ರ ಪಠಿಸುವ ಮೂಲಕ ಪುನೀತರಾದರು.
ಉಭಯ ದೇವರಿಗೆ ಅಭಿಷೇಕ, ಪ್ರಸಾದ ವ್ಯವಸ್ಥೆ ನೆರವೇರಿತು. ಸಂಜೆ ವರದಾ ನದಿ ತೀರದಲ್ಲಿ ಭಕ್ತರು ಈಜುಪಟುಗಳು ಸುರಕ್ಷತಾ ಕ್ರಮಗಳೊಂದಿಗೆ ‘ಓಂ ನಮ ಶಿವಾಯ’ ಎಂದು ಶಿವನಾಮ ಸ್ಮರಣೆ ಮಾಡುತ್ತ, ಜಯಘೋಷ ಹಾಕುತ್ತ ತೆಪ್ಪ ಎಳೆದರು. ಪಕ್ಕದ ನದಿ ನೀರಲಗಿ ಗ್ರಾಮದ ಭಕ್ತರು ಪೂಜೆ ಸಲ್ಲಿಸಿದ ಬಳಿಕ ಕೋಣನತಂಬಗಿ ದಡ ಸೇರಿತು. ನಂತರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೊಳ್ಳು, ಭಜನೆ, ಜಾಂಜ್ ಮೇಳ ಇತ್ಯಾದಿ ವಾದ್ಯಗಳಿಂದ ಸುಂದರವಾದ ಮೆರವಣಿಗೆ ಜರುಗಿತು.
ಪ್ರತಿ ವರ್ಷ ನೂಲಹುಣ್ಣಿಮೆಯಂದು ನಡೆಯುವ ಈ ವಿಶೇಷ ತೆಪ್ಪೋತ್ಸವಕ್ಕೆ ಜಿಲ್ಲೆ, ಅಕ್ಕಪಕ್ಕದ ಜಿಲ್ಲೆ ಮಾತ್ರವಲ್ಲದೇ ಪಕ್ಕದ ರಾಜ್ಯಗಳಿಂದಲೂ ಭಕ್ತರು ಆಗಮಿಸಿ ತೆಪ್ಪೋತ್ಸವ ಕಣ್ತುಂಬಿಕೊಂಡರು ಎಂದು ಗ್ರಾಮದ ಡಾ.ಗಂಗಯ್ಯ ಕುಲಕರ್ಣಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net