

ಹಾವೇರಿ: ರಾಜ್ಯ ಸರ್ಕಾರ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದು, ಕೋಳೂರು ಗ್ರಾಮಕ್ಕೆ ಪ್ರೌಢಶಾಲೆ ಮಂಜೂರಾತಿಗಾಗಿ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಭರವಸೆ ನೀಡಿದರು. ತಾಲೂಕಿನ ಕೋಳೂರು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ದೇವಗಿರಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಬಾಲ್ಯದಿಂದಲೇ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಚಟುವಟಿಕೆಗಳ ಜತೆಗೆ ಸಹಪಠ್ಯ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಕ್ರೀಡೆಗಳು ನಮ್ಮ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಹೋಳಗಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ನಿಂಗಪ್ಪ ಹುಲ್ಮನಿ ಕ್ರೀಡಾಜ್ಯೋತಿ ಬೆಳಗಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ದೊಡ್ಡಕುರುಬರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಅರಳಿ, ಗ್ರಾಪಂ ಉಪಾಧ್ಯಕ್ಷ ಬಸವರಾಜ ಉಕ್ಕುಂದ, ದೈಹಿಕ ಶಿಕ್ಷಕರಾದ ಅರುಣ ಕಾಳಪ್ಪನವರ, ಎಸ್.ಎಂ. ಕಾಮತ, ಎಂ.ಎಚ್.ಪಾಟೀಲ, ಖಾಸಿಮಸಾಬ್ ಮುಂದಿನಮನಿ, ಯಲ್ಲಪ್ಪ ಏರಿಮನಿ, ಮಂಜಣ್ಣ ಅಣ್ಣಿಗೇರಿ, ಲಕ್ಷ್ಮೀ ಬಣಕಾರ, ಶಿವಾನಂದ ಹುರಳಿ, ನಿಜಲಿಂಗಪ್ಪ ಬಸೆಗೆಣ್ಣಿ, ಫಕ್ಕೀರಪ್ಪ ತಳಗೇರಿ, ಎನ್.ಜಿ. ಅಂಗಡಿ, ಬಿ.ಎಂ. ಅಂಗಡಿ, ನಾಗರಾಜ ಹುಡೇದ, ಇತರರಿದ್ದರು.
ಬಹುಮಾನ ವಿತರಣೆ
ವಿಜೇತ ವಿದ್ಯಾರ್ಥಿಗಳಿಗೆ ಶಾಸಕ ರುದ್ರಪ್ಪ ಲಮಾಣಿ ಬಹುಮಾನ ವಿತರಿಸಿದರು. ಬಾಲಕರ ವಿಭಾಗದ ಸಮಗ್ರ ವೀರಾಗ್ರಣಿ ಪ್ರಶಸ್ತಿ ಸ.ಹಿ.ಪ್ರಾ.ಶಾಲೆ ಕೋಳೂರ ಹಾಗೂ ಬಾಲಕಿಯರ ವಿಭಾಗದ ವೀರಾಗ್ರಣಿ ಪ್ರಶಸ್ತಿಗೆ ಸ.ಹಿ.ಪ್ರಾ.ಶಾಲೆ ನಂ.1 ದೇವಗಿರಿ ಪಾಲಾಯಿತು.