

ಕೇಶವಮೂರ್ತಿ ವಿ.ಬಿ. ಹಾವೇರಿ
ಕ್ಷೀರಭಾಗ್ಯ ಯೋಜನೆಯಡಿ ಬಡ ಮಕ್ಕಳ ಹೊಟ್ಟೆ ಸೇರಬೇಕಿದ್ದ ಮೂರೂವರೆ ಟನ್ ಹಾಲಿನ ಪುಡಿಯನ್ನು ಸವಣೂರ ತಾಲೂಕಿನ ಡೊಂಬರಮತ್ತೂರ ಗ್ರಾಮದ ಮನೆಯ ಶೆಡ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಆರೋಪಿತರ ವಿರುದ್ಧ ಎಫ್‌ಐಆರ್ ದಾಖಲಿಸಲು ಧಾರವಾಡ ಹಾಲು ಒಕ್ಕೂಟ ಮೀನಮೇಷ ಎಣಿಸುತ್ತಿದೆ. ಇದರಿಂದ ಹಾಲಿನ ಪುಡಿ ದಂಧೆಯ ಹಿಂದೆ ಕಾಣದ ಕೈಗಳ ಕೈವಾಡ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಧಾರವಾಡ ಹಾಲು ಒಕ್ಕೂಟದ ಗುತ್ತಿಗೆದಾರ ಶಿವಕುಮಾರ ನಾಡಗೌಡ ದೇಸಾಯಿ ಎಂಬುವರು ಗದಗ, ಶಿರಹಟ್ಟಿ ತಾಲೂಕುಗಳ ಸರ್ಕಾರಿ ಶಾಲೆಗಳಿಗೆ ಪೂರೈಸಲು ಹಾಲಿನ ಪುಡಿ ಪಡೆದಿದ್ದರು. ಅದನ್ನು ನೇರವಾಗಿ ಶಾಲೆಗಳಿಗೆ ಸರಬರಾಜು ಮಾಡಬೇಕಿತ್ತು. ಆದರೆ, ಅದು ಹಾವೇರಿ ಹಾಲು ಒಕ್ಕೂಟದ ಹಾಲಿನ ಪುಡಿ ಸರಬರಾಜು ಮಾಡುವ ಗುತ್ತಿಗೆದಾರ ಬಸವರಡ್ಡಿ ರಡ್ಡೇರ ಎಂಬುವರ ಸವಣೂರ ತಾಲೂಕಿನ ಡೊಂಬರಮತ್ತೂರ ಗ್ರಾಮದ ಮನೆಯ ಶೆಡ್‌ನಲ್ಲಿ ಜೂ.21ರಂದು ಪತ್ತೆಯಾಗಿತ್ತು.
ಕೂಡಲೇ ಎಚ್ಚೆತ್ತುಕೊಂಡ ದಂಧೆಕೋರರು ಅದನ್ನು ಹಾವೇರಿ ತಾಲೂಕು ಜಂಗಮನಕೊಪ್ಪದಲ್ಲಿರುವ ಹಾವೇರಿ ಹಾಲು ಒಕ್ಕೂಟದ ಯುಎಚ್‌ಟಿ ಘಟಕಕ್ಕೆ ಸಾಗಿಸಲು ಯೋಚಿಸಿದ್ದರು. ಆದರೆ, ಅಂದು ಅಲ್ಲಿ ಅಂದರ್- ಬಾಹರ್ ಎಂಬ ದೊಡ್ಡ ಡ್ರಾಮಾ ನಡೆದಿತ್ತು. ಹಾವೇರಿ ತಹಸೀಲ್ದಾರ್, ಹಾವೆಮುಲ್ ಎಂಡಿ ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದರು. ಆದರೆ, ಅದು ಧಾರವಾಡ ಹಾಲು ಒಕ್ಕೂಟಕ್ಕೆ ಸೇರಿದ್ದು ಎಂದು ಗೊತ್ತಾದ ಮೇಲೂ ಮರುದಿನ ಸಂಜೆ ಅವರಿಗೆ ಒಪ್ಪಿಸಿ, ಕೈತೊಳೆದುಕೊಂಡಿದ್ದರು.
ನಂತರ ಧಾರವಾಡ ಹಾಲು ಒಕ್ಕೂಟ ಕೂಡಲೇ ಎಫ್‌ಐಆರ್ ದಾಖಲಿಸಿ, ಗುತ್ತಿಗೆದಾರರ ಲೈಸನ್ಸ್ ರದ್ದುಪಡಿಸುವ ಮೂಲಕ ದಂಧೆಕೋರರಿಗೆ ಕಠೀಣ ಸಂದೇಶ ರವಾನಿಸವಬೇಕಿತ್ತು. ಆದೆ, ಹಾಗೆ ಮಾಡದೇ ಧಾರವಾಡ ವಿದ್ಯಾಗಿರಿಯಲ್ಲಿ, ಸವಣೂರಲ್ಲಿ ಎಫ್‌ಐಆರ್ ಮಾಡುವುದಾಗಿ ಅಧಿಕಾರಿಗಳು ಕಾಲಹರಣ ಮಾಡತೊಡಗಿದರು. ಹಾಗಾಗಿ, ಕೆಎಂಎಫ್‌ನ ಕೆಲ ಅಧಿಕಾರಿ ವರ್ಗವೂ ಈ ದಂಧೆಯಲ್ಲಿ ಶಾಮೀಲಾಗಿರುವ ಸಂಶಯ ಬಲವಾಗಿ ಮೂಡುತ್ತಿದೆ. ಇನ್ನಾದರೂ ಸರ್ಕಾರ ಹಾಗೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕಿದೆ. ಅಕ್ರಮ ದಂಧೆಗೆ ಕಡಿವಾಣ ಹಾಕಬೇಕಿದೆ.
ಕೇಸ್ ಮುಚ್ಚಿ ಹಾಕುವ ಹುನ್ನಾರ ?
ಹಾವೇರಿ ಹಾಲು ಒಕ್ಕೂಟ ಹಾಗೂ ಧಾರವಾಡ ಹಾಲು ಒಕ್ಕೂಟದ ಕೆಲ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಪ್ರಭಾವ ಬಳಸಿ ಕೇಸ್ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಹಾಗಾಗಿ, ಎಫ್‌ಐಆರ್ ಮಾಡಲು ವಿಳಂಭ ಧೋರಣೆ ಅನುಸರಿಸುತ್ತಿದ್ದಾರೆ. ಈ ಅವಧಿಯೊಳಗೆ ಅವರು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂಬ ಗುಮಾನಿ ಎದ್ದಿದೆ.
ಕೋಟ್:
ಶಾಲಾ ಮಕ್ಕಳಿಗೆ ಸೇರಬೇಕಿದ್ದ ಹಾಲಿನ ಪುಡಿ ಅಕ್ರಮ ದಂಧೆಕೋರರ ಶೆಡ್ ಸೇರುತ್ತಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ. ಐದು ದಿನ ಕಳೆದರೂ ಎಫ್‌ಐಆರ್ ಮಾಡದಿರುವ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ತಪ್ಪಿತಸ್ಥರೆಲ್ಲರ ಮೇಲೆ ಕ್ರಮ ಜರುಗಿಸಬೇಕು.
- ರಾಜಶೇಖರ ಬಳ್ಳಾರಿ, ಗ್ರಾಪಂ ಸದಸ್ಯ ಡೊಂಬರಮತ್ತೂರ
ಕೋಟ್:
ಧಾರವಾಡದ ವಿದ್ಯಾಗಿರಿ ಠಾಣೆಯಲ್ಲಿ ಎಫ್‌ಆರ್ ಮಾಡಲು ಮುಂದಾಗಿದ್ದೆವು. ಸವಣೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕಾರಣ ಅಲ್ಲಿಯೇ ಪ್ರಕರಣ ದಾಖಲಿಸಲಾಗುವುದು. ಗುತ್ತಿಗೆದಾರ ಶಿವಕುಮಾರ ನಾಡಗೌಡ ದೇಸಾಯಿ ಟೆಂಡರ್ ರದ್ದುಗೊಳಲಾಗಿದೆ. ಅವರ ಲೈಸನ್ಸ್ ರದ್ದುಗೊಳಿಸಿ, ಬ್ಲಾೃಕ್‌ಲಿಸ್ಟ್‌ಗೆ ಸೇರಿಸಲಾಗುವುದು.
- ಡಾ.ವೀರೇಶ ತರಲಿ, ಎಂಡಿ, ಧಾರವಾಡ ಹಾಲು ಒಕ್ಕೂಟ
ಕಟ್ಟು ಕಥೆ 1: ಯೋಗ ದಿನಾಚರಣೆ, ಶಾಲೆಗಳಿಗೆ ರಜೆ ಇದ್ದ ಕಾರಣ ಶೆಡ್‌ನಲ್ಲಿ ಸಂಗ್ರಹಿಸಿದೆವು ಎಂದು ಸಂಗ್ರಹ ಮಾಡಿಕೊಂಡಿದ್ದವರ ಹೇಳಿಕೆ
ಕಟ್ಟು ಕಥೆ 2: ವಿದ್ಯಾಗಿರಿಯಲ್ಲಿ ಪೊಲೀಸರಿಗೆ ದೂರು ಕೊಡುತ್ತೇವೆ. ಲೈಸನ್ಸ್ ಅಮಾನತು ಮಾಡುತ್ತೇವೆ ಎಂದು ಕೆಎಂಎಫ್ ಹೇಳಿಕೆ
ಕಟ್ಟು ಕಥೆ 3: ವಿದ್ಯಾಗಿರಿ ವ್ಯಾಪ್ತಿಗೆ ಬರಲ್ಲ. ಹಾಗಾಗಿ, ಸವಣೂರ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತೇವೆ. ದಂಧೆಗೆ ಬ್ರೇಕ್ ಹಾಕುತ್ತೇವೆ ಎಂಬ ಅಧಿಕಾರಿಗಳ ಹೇಳಿಕೆ