ಹಾಲು ಒಕ್ಕೂಟ ಬೆಳೆಸುವ ಜವಾಬ್ದಾರಿ ಹೈನುಗಾರರದ್ದು; ಹಾವೆಮುಲ್ ನೂತನ ಆಡಳಿತ ಮಂಡಳಿ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಸಚಿವ ಶಿವಾನಂದ ಪಾಟೀಲ ಹೇಳಿಕೆ

15 HVR 7
Published on

ಹಾವೇರಿ: ರೈತರು ಹಾಲಿನಲ್ಲಿ ಹೆಚ್ಚಿಗೆ ನೀರು ಬೆರಿಸಿ ಮಾರಾಟ ಮಾಡಬೇಡಿ. ಇದು ಹಾಲಿನ ಗುಮಟ್ಟ ಕಡಿಮೆ ಮಾಡಲಿದೆ. ಯಾರು ಒಳ್ಳೆಯ ಹಾಲು ಪೂರೈಕೆ ಮಾಡುತ್ತಾರೋ ಅವರಿಗೆ ಒಳ್ಳೆಯ ಬೆಲೆ ಕೊಡಿ. ಒಕ್ಕೂಟವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಹೈನುಗಾರರು ಸೇರಿ ನಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹಾವೇರಿ ಜಿಲ್ಲಾ ಹಾಲು ಒಕ್ಕೂಟದ (ಹಾವೆಮುಲ್) ನೂತನ ಆಡಳಿತ ಕಚೇರಿ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಒಕ್ಕೂಟಕ್ಕೆ ರೈತರು ಹಾಲನ್ನು ಮಾರಾಟ ಮಾಡಿದಾಗ ಒಕ್ಕೂಟವು ಹಾಲನ್ನು ಬೇರೆ ಕಡೆಗೆ ಮಾರಾಟ ಮಾಡುತ್ತದೆ. ಆಗ ಹಾಲಿನ ಗುಣಮಟ್ಟ ಕಡಿಮೆ ಇದ್ದರೆ ಯಾರೂ ತೆಗೆದುಕೊಳ್ಳಲು ಮುಂದೆ ಬರುವುದಿಲ್ಲ. ಇದರಿಂದ ಸಹಜವಾಗಿ ಒಕ್ಕೂಟ ನಷ್ಟಕ್ಕೆ ಸಿಲುಕುತ್ತದೆ. ಒಕ್ಕೂಟ 50 ಪೈಸೆ ಕಡಿಮೆ ಕೊಟ್ಟರೂ ಖಾಸಗಿಯವರಿಗೆ ಹಾಲು ಕೊಡದೇ ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಸುತ್ತೇನೆ ಎಂಬ ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಮಾತ್ರ ಒಕ್ಕೂಟ ಉಳಿಯಲು, ಬೆಳೆಯಲು ಸಾಧ್ಯ ಎಂದು ಹೇಳಿದರು.

ಹಾವೆಮುಲ್ ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ಗ್ಯಾರಂಟಿ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿದರು. ಹೆಸ್ಕಾಂ ಅಧ್ಯಕ್ಷ ಅಜೀಮ್‌ಪೀರ್ ಖಾದ್ರಿ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಯಾಸೀರ್‌ಖಾನ್ ಪಠಾಣ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್‌ಪಿ ಯಶೋಧಾ ವಂಟಗೋಡಿ, ಉಜ್ಜನಗೌಡ ಮಾವಿನತೋಪ, ಶಶಿಧರ ಯಲಿಗಾರ, ಪ್ರಕಾಶ ಬನ್ನಿಹಟ್ಟಿ, ಕೊಟ್ರೇಶಪ್ಪ ಬಸೇಗೆಣ್ಣಿ, ಮಲ್ಲಿಕಾರ್ಜುನ ಸಾತೇನಹಳ್ಳಿ, ಚಂದ್ರಪ್ಪ ಜಾಲಗಾರ, ಟಾಕನಗೌಡ ಪಾಟೀಲ, ಬಸವೇಶಗೌಡ ಪಾಟೀಲ, ತಿಪ್ಪಣ್ಣ ಸಾತಣ್ಣವರ, ಹನುಮಂತಗೌಡ ಭರಮಣ್ಣವರ, ಎಂಡಿ ಪ್ರದೀಪ ಎಸ್.ಎಲ್, ಮಲ್ಲಿಕಾರ್ಜುನ ಬಳ್ಳಾರಿ, ಒಕ್ಕೂಟದ ಅಧಿಕಾರಿ, ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

ಸಹಕಾರ ಬ್ಯಾಂಕ್ ಸ್ಥಾಪಿಸಲಿ

ಮಹಾರಾಷ್ಟ್ರ, ಗುಜರಾತ್ ಮಾದರಿಯಲ್ಲಿ ನಮ್ಮಲ್ಲೂ ಹಾಲು ಉತ್ಪಾದಕರ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಿದರೆ ರೈತರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಒಕ್ಕೂಟಕ್ಕೆ ಖಾಸಗಿಯವರಿಂದ ಬಹಳಷ್ಟು ಸ್ಪರ್ಧೆ ಇದೆ. ನಮ್ಮ ರೈತರು ಒಗ್ಗಟ್ಟಾಗಿ ಹಾವೇರಿ ಒಕ್ಕೂಟ ನನ್ನದು ಎಂದು ತೀರ್ಮಾನ ಮಾಡಿದರೆ ಹಾಲು ಒಕ್ಕೂಟ ಗಟ್ಟಿಯಾಗಿ ಬೆಳೆಯುತ್ತದೆ. ಇದು ರೈತರ ಆರ್ಥಿಕ ಸ್ಥಿತಿ ಸುಧಾರಣೆ ಮಾಡಲು ಬಹಳ ಉಪಯುಕ್ತವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಕೋಟ್:

ನಾನು ಸಿಎಂ ಇದ್ದಾಗ ಮೆಗಾ ಡೇರಿಗೆ 70 ಕೋಟಿ ರೂ. ಕೊಟ್ಟಿದ್ದೇನೆ. ಆದಷ್ಟು ಬೇಗ ಮೆಗಾ ಡೇರಿ ಕಾರ್ಯ ಆರಂಭಿಸಬೇಕು. ಹಾವೇರಿಗೆ ಮೆಡಿಕಲ್ ಕಾಲೇಜ್ ಉದ್ಘಾಟನೆಗೆ ಕೇಂದ್ರ ಸಚಿವರು, ಸಿಎಂರನ್ನು ಕರೆಸಲು ತೀರ್ಮಾನಿಸಿದ್ದೇವೆ. ಅದೇ ಸಂದರ್ಭದಲ್ಲಿ ಮೆಗಾ ಡೇರಿ ಉದ್ಘಾಟನೆ ಮಾಡಲು ಪ್ರಯತ್ನಿಸೋಣ. ರೈತರ ಮುಖದಲ್ಲಿ ನಗು ಇರಬೇಕು. ರೈತ ರೇಷ್ಮೆ ಅಂಗಿ, ರೇಷ್ಮೆ ಧೋತರಾ ತೊಟ್ಟಿರಬೇಕು. ಕಾಲಾಗ ಝುರಕಿ ಚಪ್ಪಲಿ ಹಾಕಿರಬೇಕು. ರೈತ ನಕ್ಕೊಂತ ಇರಬೇಕು. ಆಗ ನಮ್ಮ ದೇಶ ಉದ್ಧಾರ ಆಗುತ್ತದೆ.

- ಬಸವರಾಜ ಬೊಮ್ಮಾಯಿ, ಸಂಸದ

ಕೋಟ್..

ಹಾವೆಮುಲ್ ಒಕ್ಕೂಟದಲ್ಲಿ ದುಡಿಯುವ ಬಂಡವಾಳ ಕಡಿಮೆ ಇದೆ. ಸರ್ಕಾರ 25 ಕೋಟಿ ಅನುದಾನ ಮೀಸಲಿಡಬೇಕು. ಒಕ್ಕೂಟದ ಆವರಣದಲ್ಲಿರುವ ಖಾಲಿ ಜಾಗವನ್ನು ಒಕ್ಕೂಟಕ್ಕೆ ಕೊಡಿಸಬೇಕು. ಪ್ರತಿ ಶಾಸಕರು ತಮ್ಮ ಅನುದಾನದಲ್ಲಿ 25 ಲಕ್ಷ ಅನುದಾನ ಮೀಸಲಿಟ್ಟು, ಆಯಾ ತಾಲೂಕು ವ್ಯಾಪ್ತಿಯಲ್ಲಿರುವ ಸೊಸೈಟಿಗಳಲ್ಲಿ ಹಾಲು ಪರೀಕ್ಷಿಸುವ ಯಂತ್ರ ಒದಗಿಬೇಕು.

- ಮಂಜನಗೌಡ ಪಾಟೀಲ, ಅಧ್ಯಕ್ಷ, ಹಾವೆಮುಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net