ವಿದ್ಯಾರ್ಥಿಯ ಸರ್ವಾಭಿವೃದ್ಧಿಗೆ ಗುರು ಪ್ರೇರಕ; ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಎಂ.ಸಿ.ಕೊಳ್ಳಿ ಅಭಿಪ್ರಾಯ; ಶಿಕ್ಷಕರ ಪಾದಪೂಜೆಗೈದ ವಿದ್ಯಾರ್ಥಿಗಳು

5 HVR 7
Published on

ಹಾವೇರಿ: ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಹೊಸತನದ ಕಲಿಕೆ ಮತ್ತು ಗ್ರಹಿಕೆ ಅತ್ಯವಶ್ಯಕವಾಗಿದ್ದು, ಶೈಕ್ಷಣಿಕವಾಗಿ ಮುನ್ನಡೆಯುತ್ತಿರುವ ವಿದ್ಯಾರ್ಥಿಯ ಸರ್ವಾಭಿವೃದ್ಧಿಗೆ ಗುರು ಪ್ರೇರಕನಾಗಿದ್ದಾನೆ ಎಂದು ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ.ಕೊಳ್ಳಿ ಅಭಿಪ್ರಾಯಪಟ್ಟರು.
ನಗರದ ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 137ನೇ ಜನ್ಮದಿನ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗತ್ತು ಕಂಡ ಶ್ರೇಷ್ಠ ತತ್ವಜ್ಞಾನಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್. ಅವರ ಬದುಕೇ ಒಂದು ದಂತಕಥೆಯಾಗಿದೆ. ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿ ದೇಶಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು. ಅರಿವನ್ನು ಜಾಗೃತಗೊಳಿಸಿ ಗುರಿ ತಲುಪಿಸುವಲ್ಲಿ ಇಂತಹ ಗುರುಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಪದವಿ ಕಾಲೇಜ್‌ನ ಕನ್ನಡ ಉಪನ್ಯಾಸಕ ಪ್ರೊ.ಶಮಂತಕುಮಾರ ಕೆ.ಎಸ್. ಮಾತನಾಡಿ ಆಧುನಿಕ ದಿನಮಾನದಲ್ಲಿ ವಿದ್ಯಾರ್ಥಿಗಳು ಸನ್ಮಾರ್ಗದ ಬದುಕಿನ ದಾರಿ ಕಂಡುಕೊಳ್ಳಬೇಕಿದೆ. ಆ ದಿಶೆಯಲ್ಲಿ ಸಂಸ್ಕೃತಿ, ಸಂಸ್ಕಾರದ ಗುಣಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ದಾರಿ-ಗುರಿ ಒಂದಾಗಿದ್ದರೆ ಗುರು ಸ್ಪೂರ್ತಿ ತುಂಬಿದಾಗ ಸಾಧನೆಯ ಹಾದಿಯ ನಿರ್ಮಾಣ ಸರಳವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಜೆ.ಆರ್.ಶಿಂಧೆ ಮಾತನಾಡಿ, ಶಿಕ್ಷಕ ಎಂದರೆ ಅದ್ಭುತ ಶಕ್ತಿ. ಆ ಶಕ್ತಿ ಇಂದಿನ ವಿದ್ಯಾರ್ಥಿಗಳಿಗೆ ಯುಕ್ತಿಯಾಗಬೇಕಾಗಿದೆ ಎಂದರು.
ಸಮಾರಂಭದಲ್ಲಿ ವಿಶೇಷವಾಗಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗುರುಗಳ ಪಾದಪೂಜೆ ನೆರವೇರಿಸುವ ಮೂಲಕ ಧನ್ಯವಾದ ಸಮರ್ಪಿಸಿದರು.
ವೇದಿಕೆಯಲ್ಲಿ ಪ್ರೊ.ಆರ್.ಎಸ್.ರಾಯ್ಕರ, ಪ್ರೊ.ಎನ್.ಎ.ಗಾಣಗಿ, ಪ್ರೊ.ಎ.ಎ.ಉಗರಗೋಳ, ಪ್ರೊ.ಸಿ.ಎಫ್.ಬಾಳೇಶ್ವರಮಠ, ಪ್ರೊ.ಎಂ.ಎಸ್.ಬೆಂಡಿಗೇರಿ, ಡಾ.ಎಂ.ವಿ.ಸಾತೇನಹಳ್ಳಿ, ಪ್ರೊ.ಎನ್.ಐ.ಮುಚ್ಚಟ್ಟಿ, ಪ್ರೊ.ಯು.ಎ.ಕಂಟೆ, ಪ್ರೊ.ಜಿ.ಬಿ.ಹೊಸಳ್ಳಿ, ಸೀಮಾ ಕುರ್ಲೆ, ಬೋಧಕ, ಬೋಧಕೇತರ ಸಿಬ್ಬಂದಿ ಪಾಲೊಂಡಿದ್ದರು. ರಾಜೇಶ್ವರಿ ತಂಡದವರು ಪ್ರಾರ್ಥಿಸಿದರು. ಪ್ರೊ.ಚೇತನಾ ಪರಪ್ಪನವರ ಸ್ವಾಗತಿಸಿದರು. ಪ್ರೊ.ಎಸ್.ಜಿ.ಹುಣಸೀಕಟ್ಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಬಸವರಾಜೇಶ್ವರಿ ಜಿ.ಕೆ. ನಿರೂಪಿಸಿದರು. ಪ್ರೊ.ಜೆ.ಎ.ದೊಡ್ಡಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net