ಸಂವಹನ ಕೌಶಲದಿಂದ ವ್ಯಕ್ತಿತ್ವ ವಿಕಸನ; ಜಿಎಚ್ ಕಾಲೇಜ್ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪದಲ್ಲಿ ಡಾ.ಎಚ್.ವಿ.ವಿಶ್ವೇಶ ಹೇಳಿಕೆ

16 HVR 3
Published on

ಹಾವೇರಿ: ವ್ಯಕ್ತಿತ್ವ ವಿಕಾಸ ಮತ್ತು ಸರ್ವಾಂಗೀಣ ಪ್ರಗತಿ ಹೊಂದಲು ಸಂವಹನ ಕೌಶಲಗಳ ಅಗತ್ಯವಿದ್ದು, ಸ್ಪರ್ಧಾತ್ಮಕ ಜಗತ್ತಿನಲ್ಲಿ ದಿನೇ ದಿನೇ ವ್ಯಾಪಕವಾಗಿ ಹೆಚ್ಚುತ್ತಿರುವ ಅವಕಾಶಗಳ ಸದ್ಭಳಕೆಯನ್ನು ಇಂದಿನ ಸಮೂಹ ಮಾಡಬೇಕಿದೆ ಎಂದು ಅರಿವು ಕೌಶಲ ಅಭಿವೃದ್ಧಿ ನಿಗಮದ ಸಂಸ್ಥಾಪಕ ಡಾ.ಎಚ್.ವಿ.ವಿಶ್ವೇಶ ಅಭಿಪ್ರಾಯಪಟ್ಟರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 2023-24ನೇ ಶೈಕ್ಷಣಿಕ ವರ್ಷದ ಕಾಲೇಜು ಒಕ್ಕೂಡ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ವ್ಯಕ್ತಿತ್ವ ನಿರ್ಮಾಣ ಮೊದಲಾಗಬೇಕಿದೆ. ಅದಕ್ಕಾಗಿ ವಿದ್ಯಾರ್ಥಿಗಳಾದವರು ಕೇವಲ ಪರೀಕ್ಷೆಯ ಅಂಕಗಳಿಗೆ ಚಿತ್ತ ಹೆಚ್ಚಿಸದೇ ಕೌಶಲಯುಕ್ತ ಜ್ಞಾನ ಪಡೆದು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶಿಸ್ತು, ಸಮಯ ಪಾಲನೆ, ನಿಯಮಿತ ಕಾರ್ಯ, ನಿರಂತರ ಅಧ್ಯಯನ ಮತ್ತು ಪ್ರಜ್ಞಾವಂತಿಕೆ ಗಟ್ಟಿಗೊಂಡಾಗ ಸಾಧನೆ ಸುಲಭ ಸಾಧ್ಯವಾಗುತ್ತದೆ. ಕಲಿಕೆಯ ಜತೆಗೆ ಗಳಿಕೆಯತ್ತ ನಿರತರಾಗುವುದು ಉತ್ತಮ. ಇಂದಿನ ಜಗತ್ತು ಅತ್ಯಂತ ಬಲವಾಗಿ ಓಡುತ್ತಿದ್ದು ಅದರ ಜತೆಗೆ ನಾವೂ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಇದೆ. ವ್ಯಕ್ತಿ ವಿಕಾಸವಾಗದ ಹೊರತು ಜಗತ್ತು ಬದಲಾಗದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ.ಕೊಳ್ಳಿ ಮಾತನಾಡಿದರು. ಶೈಕ್ಷಣಿಕ ಮತ್ತು ಕ್ರೀಡಾ ವಿಭಾಗದಲ್ಲಿ ಸಾಧನೆಗೈದ ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.
ಪ್ರಾಚಾರ್ಯೆ ಡಾ.ಸಂಧ್ಯಾ ಆರ್. ಕುಲಕರ್ಣಿ ವಾರ್ಷಿಕ ವರದಿ ವಾಚಿಸಿದರು. ಸಾಂಸ್ಕೃತಿಕ ವೇದಿಕೆ ಕಾರ್ಯಾಧ್ಯಕ್ಷೆ ಡಾ.ಎಂ.ಪಿ.ಕಣವಿ ಸಾಧನಾ ಶಿರೋಗಾಥೆ ವಾಚಿಸಿದರು.
ವೇದಿಕೆಯಲ್ಲಿ ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಜೆ.ಎಸ್.ಅರಣಿ, ನಿವೃತ್ತ ಪಾಚಾರ್ಯ ಡಾ.ಬಿ.ಸಿ.ಬನ್ನೂರ ಉಪಸ್ಥಿತರಿದ್ದರು. ವೈಷ್ಣವಿ ಸಿಂಗಾಪುರೆ ಪ್ರಾರ್ಥಿಸಿದರು. ರೇಣುಕಾ ಸಂಗಡಿಗರು ನಾಡಗೀತೆ ಹಾಡಿದರು. ಕಾಲೇಜು ಒಕ್ಕೂಟದ ಉಪಾಧ್ಯಕ್ಷ ಪ್ರೊ.ಡಿ.ಎ.ಕೊಲ್ಲಾಪುರೆ ಸ್ವಾಗತಿಸಿದರು. ಶಾರದಾ ಜಿ.ಎಸ್. ಹಾಗೂ ಜಾಸ್ಮಿನ್ ನದಾಫ್ ನಿರೂಪಿಸಿದರು. ಪ್ರತೀಕಾ ಆರ್.ಬಿ.ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net