

ಹಾವೇರಿ: ಭಾರತದ ಚಾರಿತ್ರಿಕ ಇತಿಹಾಸದಲ್ಲಿ ಅಚ್ಚಳಿಯದ ಕಾರ್ಯವೆಸಗಿದ ಶಿರಸಂಗಿ ದೇಸಾಯಿ ಸಂಸ್ಥಾನದ ಲಿಂಗರಾಜರ ತ್ಯಾಗ ಮತ್ತು ದೂರದೃಷ್ಠಿಯ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಅಭಿಪ್ರಾಯಪಟ್ಟರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜರ 163ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಸಮಾಜಾಭಿವೃದ್ಧಿ ಮತ್ತು ಪ್ರದೇಶಾಭಿವೃದ್ಧಿಯ ಕನಸು ಕಂಡಿದ್ದ ಲಿಂಗರಾಜರು ದೇಸಾಯಿ ಮನೆತನದ ಅನರ್ಘ್ಯ ರತ್ನ. ಘನತೆಗೆ ತಕ್ಕಂತಹ ವಿಶಾಲ ವಿಚಾರಗಳನ್ನು ತುಂಬಿಕೊಂಡಿದ್ದ ಅವರು ಬಾಲ್ಯ ವಿವಾಹಕ್ಕೆ ವಿರೋಧಿಸಿದ್ದರು. ವಿಧವಾ ವಿವಾಹಕ್ಕೆ ಪ್ರೋತ್ಸಾಹಿಸಿದ್ದರು. ಕೆರೆ ಕಟ್ಟೆಗಳನ್ನು ಕಟ್ಟಿಸಿ, ದೇಸಿ ಕೃಷಿಗೆ ಹೊಸತನದ ಮೆರೆಗು ತಂದರು. ಸಾವಯವ ಕೃಷಿ ಮೂಲಕ ಆಧುನಿಕ ಶೈಲಿಯ ವ್ಯವಸಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು ಎಂದರು.
ನೊಂದವರು, ನಿರ್ಗತಿಕರ, ಸಮಾಜದಿಂದ ದೂರವಿದ್ದವರ ಪರವಾಗಿ ಧ್ವನಿ ಎತ್ತಿದವರು ಲಿಂಗರಾಜರು. ಅನೇಕ ವಿಧಾಯಕ ಕಾರ್ಯಸುಧಾರಣೆಗಳನ್ನು ಜಾರಿಗೆ ತಂದವರು. ವೈಯಕ್ತಿಕ ಬದುಕಿನಲ್ಲಿ ಎಷ್ಟೇ ನೋವು-ಸಂಕಟಗಳಿದ್ದರೂ ಸಾಮಾಜಿಕವಾಗಿ ಹುಮ್ಮಸ್ಸಿನ ಸೇವೆ ಸಲ್ಲಿಸಿದರು. ಸಮಾಜಕ್ಕಾಗಿ ತಮ್ಮ ಸರ್ವಸ್ವವನ್ನೂ ದಾನ ಮಾಡಿ ತ್ಯಾಗವೀರರಾದರು ಎಂದರು.
ಕೆ.ಎಲ್.ಇ. ಶಿಕ್ಷಣ ಸಂಸ್ಥೆ ಸ್ಥಾಪಿಸುವಲ್ಲಿ, ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕಟ್ಟುವಲ್ಲಿ ಅವರು ತೋರಿದ ಉತ್ಸಾಹ ಮತ್ತು ದಾನಗಳ ಪರಿಣಾಮದಿಂದ ಶಿಕ್ಷಣ ಕ್ಷೇತ್ರ ಮತ್ತು ಸಮಾಜಗಳು ಸಂಘಟನೆಯಾಗಲು ಸಹಕಾರಿಯಾಗಿದ್ದನ್ನು ಯಾರೂ ಮರೆಯುವಂತಿಲ್ಲ. ಸ್ವಂತಕ್ಕಾಗಿ ಏನನ್ನೂ ಬಯಸದ ಲಿಂಗರಾಜರು ಕೆ.ಎಲ್.ಇ. ಸಂಸ್ಥೆಗೆ ಮಾಡಿದ ಮಹದುಪಕಾರ ಮರೆಯಲಾಗದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ.ಎಸ್.ಎಲ್.ಬಾಲೇಹೊಸೂರ ಮಾತನಾಡಿ, ಶಿರಸಂಗಿ ಲಿಂಗರಾಜರ ಹೃದವಂತಿಕೆ ಮತ್ತು ವಿಶಾಲ ಮನೋಭಾವನೆಗಳು ಸಮಾಜಕ್ಕೆ ಆದರ್ಶನೀಯವಾಗಿವೆ. ಅವರ ತ್ಯಾಗ ಮತ್ತು ದಾನದ ಪ್ರತಿಫಲವಾಗಿ ಸಮಾಜ ಉನ್ನತಿಯತ್ತ ಸಾಗುವಂತಾಗಿದೆ. ಸರಳ ಮತ್ತು ಅಪರೂಪದ ವ್ಯಕ್ತಿತ್ವದೊಂದಿಗೆ ಸದಾಚಾರಗಳನ್ನು ರೂಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರ ಚಿಂತನೆಗಳು ಸಮಾಜದ ದೀವಟಿಗೆಯಾಗಲೆಂದರು.
ಸಮಾರಂಭದಲ್ಲಿ ಕೆಎಲ್‌ಇ ಸ್ಥಾನಿಕ ಮಂಡಳಿ ಸದಸ್ಯರಾದ ಬಸವರಾಜ ಮಾಸೂರ, ಜೆ.ಎಸ್.ಅರಣಿ, ಬಿಸಿಎ ಸಂಯೋಜಕ ಪ್ರೊ. ವೆಂಕಟೇಶ ಕಲಾಲ, ಐಕ್ಯೂಎಸಿ ಸಂಯೋಜಕ ಪ್ರೊ.ಟಿ.ವಿ.ಚವ್ಹಾಣ, ಇತರರು ಉಪಸ್ಥಿತರಿದ್ದರು.
ಸುವರ್ಣಾ-ಸುಕನ್ಯಾ ಪ್ರಾರ್ಥಿಸಿದರು. ಪ್ರಾಚಾರ್ಯೆ ಡಾ.ಸಂಧ್ಯಾ ಕುಲಕರ್ಣಿ ಸ್ವಾಗತಿಸಿದರು. ಕಾಲೇಜು ಒಕ್ಕೂಟದ ಉಪಾಧ್ಯಕ್ಷ ಪ್ರೊ.ಡಿ.ಎ.ಕೊಲ್ಹಾಪುರೆ ಪರಿಚಯಿಸಿದರು. ಪ್ರೊ.ಬಸವರಾಜ ಹೊಂಗಲ ನಿರೂಪಿಸಿದರು. ಪ್ರೊ.ಶಮಂತಕುಮಾರ ಕೆ.ಎಸ್. ವಂದಿಸಿದರು.