ಎನ್.ಎಸ್.ಎಸ್‌ನಿಂದ ಗಾಂಧೀಜಿ ಕನಸು ಸಾಕಾರ; ಜಿಎಚ್ ಕಾಲೇಜ್ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯಲ್ಲಿ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ಹೇಳಿಕೆ

24 HVR 8
Published on

ಹಾವೇರಿ: ಸಾಮಾಜಿಕ ವ್ಯವಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಕಂಡ ಕನಸು ಸಾಕಾರಗೊಳಿಸುವಲ್ಲಿ ಎನ್.ಎಸ್.ಎಸ್. ಘಟಕಗಳು ನಿರಂತರ ಪರಿಶ್ರಮವಹಿಸಿ ಸೇವಾ ಕಾರ್ಯ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಎಚ್. ಜಂಗಮಶೆಟ್ಟಿ ಹೇಳಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಬುಧವಾರ ಎನ್.ಎಸ್.ಎಸ್. ಹಾಗೂ ಐಕ್ಯುಎಸಿ ಜಂಟಿಯಾಗಿ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ ‘ಪೌರ ಪ್ರಣಾಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವರಾಜ್ಯ ಸಂಗ್ರಾಮದಲ್ಲಿ ಗಾಂಧೀಜಿ ಗ್ರಾಮ ಭಾರತ ಕಟ್ಟುವಲ್ಲಿ ಮುತುವರ್ಜಿ ವಹಿಸಿದ್ದರು. ಹಳ್ಳಿಗಳು ದೇಶವನ್ನು ಕಟ್ಟಿಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವಂತಾಗಲಿ ಎಂಬುದು ಅವರ ಆಶಯವಾಗಿತ್ತು. ಆ ದೆಸೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ನಾಡಿನಾದ್ಯಂತ ಜನೋಪಯೋಗಿ ಸೇವಾ ಕಾರ್ಯ ಮಾಡುತ್ತ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಹಾವೇರಿ ನಗರವನ್ನು ಶುಚಿಯಾಗಿಡುವಲ್ಲಿ ಶ್ರಮಿಸುವ ಪೌರಕಾರ್ಮಿಕರನ್ನು ಗೌರವಿಸುತ್ತಿರುವುದು ಜಿ.ಎಚ್. ಕಾಲೇಜ್‌ನ ಸಾಮಾಜಿಕ ಕಳಕಳಿ ತೋರುತ್ತದೆ ಎಂದರು.

ಸಮಾರಂಭದಲ್ಲಿ ಕುಲಸಚಿವ ಡಾ.ಎಸ್.ಟಿ.ಬಾಗಲಕೋಟಿ, ನಗರಸಭೆ ಅಧ್ಯಕ್ಷೆ ಶಶಿಕಲಾ ರಾಮು ಮಾಳಗಿ, ಹಾವಿವಿ ಸಿಂಡಿಕೇಟ್ ಸದಸ್ಯ ಡಾ.ರಮೇಶ ತೆವರಿ, ಹಾವಿವಿ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಡಾ.ಸಿ.ಎಸ್.ಕುಮ್ಮೂರ, ಕಾಲೇಜ್ ಸ್ಥಾನಿಕ ಮಂಡಳಿ ಕಾಯಾಧ್ಯಕ್ಷ ಡಾ.ಎಸ್.ಎಲ್.ಬಾಲೇಹೊಸೂರ, ಸದಸ್ಯರಾದ ಸಿ.ಬಿ.ಹಿರೇಮಠ, ಜೆ.ಎಸ್.ಅರಣಿ, ನಗರಸಭೆ ಪೌರನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ ಬಿದರಿ, ಹೊರಗುತ್ತಿಗೆ ಪೌರನೌಕರರ ಸಂಘದ ಅಧ್ಯಕ್ಷ ರಾಜು ಮಾಳಗಿ, ಸಂಚಾಲಕ ರಾಜಪ್ಪ ಹೊಸಮನಿ, ಐಕ್ಯುಎಸಿ ಸಂಯೋಜಕಿ ಪ್ರೊ.ರೂಪಾ ಕೋರೆ, ಇತರರು ಉಪಸ್ಥಿತರಿದ್ದರು.

ತುಂಗಾ ಅವರಿಂದ ಭರತನಾಟ್ಯ ಜರುಗಿತು. ಪದವಿ ಪ್ರಾಚಾರ್ಯ ಪ್ರೊ.ಎಂ.ಎಂ.ಹೊಳ್ಳಿಯವರ ಸ್ವಾಗತಿಸಿದರು. ಎನ್.ಎಸ್.ಎಸ್. ಯೋಜನಾಧಿಕಾರಿ ಡಾ.ಶಮಂತಕುಮಾರ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಮಣಿಕಂಠ ಗೋಧಮನಿ ಮತ್ತು ವಿದ್ಯಾ ಪಾಟೀಲ ನಿರೂಪಿಸಿದರು. ಡಾ.ಶಿವಾನಂದ ಪಾಯಮಲ್ಲೆ ವಂದಿಸಿದರು.

134 ಪೌರ ಕಾರ್ಮಿಕರಿಗೆ ಸನ್ಮಾನ

ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ.ಕೊಳ್ಳಿ ಹಾಗೂ ಗಣ್ಯರು 134 ಜನ ಪೌರ ಕಾರ್ಮಿಕರಿಗೆ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net