ಪ್ರಾಣ ಲೆಕ್ಕಿಸದೇ ದೇಶಕ್ಕಾಗಿ ಮಡಿದ ಕಾರ್ಗಿಲ್ ಯೋಧರು ಗ್ರೇಟ್; ಜಿಎಚ್ ಕಾಲೇಜ್ ಪ್ರಾಚಾರ್ಯೆ ಡಾ.ಸಂಧ್ಯಾ ಕುಲಕರ್ಣಿ

27 HVR 4 B
Published on

ಹಾವೇರಿ: ಕಾರ್ಗಿಲ್ ಯುದ್ದದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಭಾರತೀಯ ಸೈನಿಕರು ದೇಶಕ್ಕೋಸ್ಕರ ಹುತಾತ್ಮರಾಗಿ ದಿಗ್ವಿಜಯ ತಂದಿದ್ದನ್ನು ಯಾರೂ ಮರೆಯುವಂತಿಲ್ಲ. ಇಂತಹ ಯೋಧರೇ ಗ್ರೇಟ್ ಎಂದು ಕೆಎಲ್‌ಇ ಜಿಎಚ್ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಸಂಧ್ಯಾ ಕುಲಕರ್ಣಿ ಹೇಳಿದರು.
ನಗರದ ಕೆಎಲ್‌ಇ ಜಿಎಚ್ ಕಾಲೇಜ್‌ನಲ್ಲಿ ಎನ್.ಸಿ.ಸಿ. ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದ ರಕ್ಷಣೆಗಾಗಿ 1999ರಲ್ಲಿ ನಡೆದಂತಹ ಕಾರ್ಗಿಲ್ ಯುದ್ಧ ಅವಿಸ್ಮರಣೀಯವಾದುದು. ಇಂದು ದೇಶವು ಕಾರ್ಗಿಲ್ ಯುದ್ಧದ ವೀರರನ್ನು ಗೌರವಿಸುವ ಮತ್ತು ಪಾಕಿಸ್ತಾನದ ವಿರುದ್ಧದ ವಿಜಯವನ್ನು ಆಚರಿಸುವ ದಿನವಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರಾಂತವನ್ನು ಆಕ್ರಮಿಸಿಕೊಂಡಿದ್ದ ಪಾಕಿಸ್ತಾನಕ್ಕೆ ಯುದ್ಧದ ಮುಖಾಂತರ ಪ್ರತ್ಯುತ್ತರ ನೀಡಿದ ಭಾರತ ದೇಶ ಸುಮಾರು 60 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಜುಲೈ 26, 1999ರಂದು ಯಶಸ್ಸು ಸಾಧಿಸಿತು. ಆಪರೇಷನ್ ವಿಜಯ್‌ನಲ್ಲಿ ಭಾಗವಹಿಸಿದ ಸೈನಿಕರು ತೋರಿಸಿದ ಧೈರ್ಯ, ಶೌರ್ಯ ಮತ್ತು ಸಮರ್ಪಣೆ ಎಂದೆಂದಿಗೂ ಚಿರಸ್ಮರಣೀಯವಾದುದು ಎಂದು ನೆನೆದರು.
ಪದವಿಪೂರ್ವ ಕಾಲೇಜ್ ಪ್ರಾಚಾರ್ಯ ಡಾ.ಜ್ಯೋತಿಬಾ ಶಿಂಧೆ, ಎನ್.ಸಿ.ಸಿ. ಅಧಿಕಾರಿ ಡಾ.ನಾಗರಾಜ ಎಂ., ಪ್ರೊ.ಎಂ.ಎಚ್.ಗುಡಗೇರಿ, ಪ್ರೊ.ಪ್ರಶಾಂತ ಕೋರಿಶೆಟ್ಟರ್, ಎನ್.ಸಿ.ಸಿ. ಕೆಡೆಟ್‌ಗಳು, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net