

ಹಾವೇರಿ: ನಗರದ ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ಹಾವೇರಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಸಮಗ್ರ ವೀರಾಗ್ರಣಿಗೆ ಭಾಜನರಾಗಿದ್ದಾರೆ.
ಬ್ಯಾಸ್ಕೆಟ್‌ಬಾಲ್, ಹ್ಯಾಂಡ್‌ಬಾಲ್, ಟಿಟಿ, ಫುಟ್‌ಬಾಲ್, ಚೆಸ್, ಕಬಡ್ಡಿ, ಖೋಖೋ, ಬ್ಯಾಡ್ಮಿಂಟನ್, ಉದ್ದ ಜಿಗಿತ, ಎತ್ತರ ಜಿಗಿತ, ಚಕ್ರ ಎಸೆತ, ಗುಂಡು ಎಸೆತ, ಭರ್ಚಿ ಎಸೆತ, ಓಟ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ವೈಯಕ್ತಿಕ ಹಾಗೂ ಗುಂಪುಗಳಾಗಿ ಪಾಲ್ಗೊಂಡು ಅತಿಹೆಚ್ಚು ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದು ಸಾಧನೆ ತೋರಿದ್ದಾರೆ. ಒಟ್ಟು 52 ವಿದ್ಯಾರ್ಥಿಗಳು, 25 ವಿದ್ಯಾರ್ಥಿನಿಯರು ವಿಜೇತರಾಗಿ ಜಿಲ್ಲಾ ಮಟ್ಟದ ಕ್ರೀಡೆಗೆ ಆಯ್ಕೆಯಾಗಿದ್ದಾರೆ. ಈ ತಂಡಕ್ಕೆ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಕಾಂತ ಗುಡಗುಡಿ ಮಾರ್ಗದರ್ಶನ ಮಾಡಿದ್ದರು.
ಸ್ಪರ್ಧಾಳುಗಳ ಈ ಸಾಧನೆಗೆ ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಎಂ.ಸಿ.ಕೊಳ್ಳಿ, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ.ಎಸ್.ಎಲ್.ಬಾಲೇಹೊಸೂರ, ಸದಸ್ಯರಾದ ಸಿ.ಬಿ.ಹಿರೇಮಠ, ಬಸವರಾಜ ಮಾಸೂರ, ಜೆ.ಎಸ್.ಅರಣಿ ಹಾಗೂ ಪ್ರಾಚಾರ್ಯರಾದ ಡಾ.ಸಂಧ್ಯಾ ಕುಲಕರ್ಣಿ ಹಾಗೂ ಡಾ.ಜೆ.ಆರ್.ಶಿಂಧೆ ಹರ್ಷ ವ್ಯಕ್ತಪಡಿಸಿದ್ದಾರೆ.