

ಹಾವೇರಿ: ಸ್ಪರ್ಧಾತ್ಮಕ ಜಗತ್ತು ಅತ್ಯಂತ ವೇಗವಾಗಿ ಓಡುತ್ತಿದ್ದು, ಅದರ ಓಟಕ್ಕೆ ಸಮನಾಗಿ ಅಧ್ಯಯನ ಮಾಡುವಂತೆ ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ.ಕೊಳ್ಳಿ ಸಲಹೆ ನೀಡಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಮಹಾವಿದ್ಯಾಲಯದ ವತಿಯಿಂದ 2024-25ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಕೆಸಿಇಟಿ ಹಾಗೂ ನೀಟ್ ತರಬೇತಿ ಶಿಬಿರವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವನ ಬದುಕು ಅಜ್ಞಾನದಿಂದ ಸುಜ್ಞಾನದೆಡೆಗೆ. ಕತ್ತಲೆಯಿಂದ ಬೆಳಕಿನೆಡೆಗೆ, ಭಯದಿಂದ ನಿರ್ಭಯದೆಡೆಗೆ, ಅದರಾಚೆಗೂ ಅಮರತ್ವದೆಡೆಗೆ ಸಾಗುವಂತಾಗಬೇಕು. ಸತ್ಯ ಸಜ್ಜನಿಕೆಯ ಜ್ಞಾನ ಸಂಜೀವಿನಿಯ ಸುಜ್ಞಾನಕ್ಕೆ ಸುವರ್ಣ ಮಾಧ್ಯಮವೆಂದರೆ ಶಿಕ್ಷಣ. ಆ ಜ್ಞಾನಾಮೃತವನ್ನು ಮಕ್ಕಳಿಗೆ ದೊರಕುವಂತೆ ಮಾಡುವ ಜವಾಬ್ದಾರಿ ನಿರಂತರವಾಗಿ ಕೆ.ಎಲ್.ಇ. ಸಂಸ್ಥೆ ಮಾಡಿಕೊಂಡು ಬಂದಿದೆ ಎಂದರು.
ಒಂದು ಸಣ್ಣ ಬೀಜದಲ್ಲಿ ಬೃಹದಾಕಾರದ ಮರ ಅಂಕುರಗೊಳ್ಳುವಂತೆ, ಆ ಚಿಕ್ಕ ಬೀಜದಲ್ಲಿ ವಿಶಾಲ ಮರದ ಹೂವು, ಹಣ್ಣು, ಕಾಯಿಗಳು ಸತ್ವಯುತವಾಗಿ ಫಲವತ್ತತೆಯನ್ನು ಕೊಡುವಂತಾಗಲು ನೀರು, ಗೊಬ್ಬರ, ಮೊದಲಾದ ಪೂರಕ ಅಂಶಗಳ ಅವಶ್ಯಕತೆ ಇದೆ. ಹಾಗೆಯೇ ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ಉಪಯುಕ್ತ ರೀತಿಯಲ್ಲಿ ಜ್ಞಾನ ಸಂಪಾದನೆಗೆ ಅನುಕೂಲಕರ ವಾತಾವರಣ ನಿರ್ಮಿಸಬೇಕಿದೆ.
ವಿಶೇಷವಾಗಿ ಈ ವರ್ಷ ಪೇಸ್, ಐಐಟಿ ಮತ್ತು ಮೆಡಿಕಲ್ ಸಂಸ್ಥೆಗಳ ತರಬೇತುದಾರ ಆದರ್ಶ ಪಾಟೀಲ ಮಾರ್ಗದರ್ಶನದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಧಾರವಾಡ ಸೂರತ್ಕಲ್ ಎಂ.ಎಸ್.ಪುರ್ಡೆ ವಿವಿಯ ಶಾಖಾ ಕಚೇರಿಯ ಮುಖ್ಯಸ್ಥ ಪ್ರೊ.ಆದರ್ಶ ಪಾಟೀಲ ಮತ್ತು ಧಾರವಾಡದ ವಿಷಯ ತಜ್ಞ ಡಾ.ಗುರುನಾಥ ಜಾಧವ ಪಾಲ್ಗೊಂಡಿದ್ದರು.
ಸಮಷ್ಠಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪಪೂ ಪ್ರಾಚಾರ್ಯ ಡಾ.ಜೆ.ಆರ್.ಶಿಂಧೆ ಸ್ವಾಗತಿಸಿದರು. ಪ್ರೊ.ಆರ್.ಎಸ್.ರಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅವಿಕ್ಷಾರಷ್ಮಿ ಸವಣೂರು ನಿರೂಪಿಸಿದರು. ಡಾ.ಶಿವರಾಜ ಮಂಟೂರ ವಂದಿಸಿದರು.