ವಿದ್ಯಾರ್ಥಿಗಳಲ್ಲಿ ಪೌಷ್ಠಿಕಾಂಶದ ಕೊರತೆ ಹೆಚ್ಚು; ರಕ್ತದಾನ ದಿನಾಚರಣೆಯಲ್ಲಿ ಡಾ.ಹಾವನೂರ ಸಲಹೆ

6 HVR 2 A
Published on

ಹಾವೇರಿ: ಇಂದಿನ ಬಹುತೇಕ ವಿದ್ಯಾರ್ಥಿಗಳಲ್ಲಿ ಪೌಷ್ಠಿಕಾಂಶದ ಸಾಕಷ್ಟು ಕೊರತೆ ಎದ್ದು ಕಾಣುತ್ತಿದೆ. ಸರಿಯಾದ ಆಹಾರ ಸೇವಿಸದ ಕಾರಣ. ಅನೇಕ ಕಾಯಿಲೆಗಳಿಗೆ ತುತ್ತಾಗುವ ಮೂಲಕ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್.ಹಾವನೂರ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಕೆಎಲ್‌ಇ ಸೊಸೈಟಿ ಸಹಯೋಗದೊಂದಿಗೆ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಸ್ವಯಂಪ್ರೇರಿತ ರಕ್ತದಾನ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಯುವಕ- ಯುವತಿಯರು ಪೌಷ್ಠಿಕಾಂಶ ಇರುವ ಆಹಾರ ಸೇವಿಸುವ ಮೂಲಕ ದೈಹಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ಜತೆಗೆ ವೈದ್ಯರ ಸಲಹೆ ಮೇರೆಗೆ ಆಗಾಗ ರಕ್ತದಾನ ಮಾಡಬೇಕು. ಮನುಷ್ಯನ ರಕ್ತಕ್ಕೆ ಬೇರಾವ ರಕ್ತವೂ ಹೊಂದುವುದಿಲ್ಲ. ಹಾಗಾಗಿ, ಮನುಷ್ಯರಾದ ನಾವೆಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ.ಸಂಧ್ಯಾ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಚೀನಿ ಆಹಾರ ಸೇವಿಸದೇ, ದೇಸಿ ಆಹಾರ ಸೇವಿಸಬೇಕು. ಇದರಿಂದ ದೇಹದ ಸಮತೋಲನ ಸಾಧ್ಯವಾಗುತ್ತದೆ. ಮಾನಸಿಕ ಆರೋಗ್ಯದ ಜತೆಗೆ ದೈಹಿಕ ಆರೋಗ್ಯವನ್ನು ಸುವ್ಯವಸ್ಥಿತವಾಗಿ ಇಟ್ಟುಕೊಂಡರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ. ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವ ಉಳಿಸಿ ಎಂದು ಕರೆ ನೀಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ನೀಲೇಶ ಎಂ.ಎನ್. ಹಾಗೂ ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ ತಳವಾರ ಮಾತನಾಡಿದರು. ರಕ್ತದಾನದ ಮಹತ್ವ, ರಕ್ತದಾನ ಯಾರು ಮಾಡಬೇಕು, ಯಾರು ಮಾಡಬಾರದು, ರಕ್ತದಾನ ಮಾಡುವುದರಿಂದ ಆಗುವ ಉಪಯೋಗಗಳ ಕುರಿತು ವಿವರಿಸಿದರು.
ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ 35 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಹೆಚ್ಚು ಬಾರಿ ರಕ್ತದಾನ ಮಾಡಿದ ರಾಣೆಬೆನ್ನೂರಿನ ಶ್ರೀನಿವಾಸ ಏಕಬೋಟೆ, ಸವಣೂರು ಚಳ್ಳಾಳದ ಸುರೇಶ ಕಳ್ಳಿಮನಿ ಹಾಗೂ ದೇವಿಹೊಸೂರಿನ ಗಣೇಶಗೌಡ ಅವರನ್ನು ಸನ್ಮಾನಿಸಲಾಯಿತು. ಹೆಚ್ಚು ರಕ್ತದಾನ ಶಿಬಿರ ಏರ್ಪಡಿಸಿದ ಲಯನ್ಸ್ ಕ್ಲಬ್ ರಾಣೆಬೆನ್ನೂರ, ಸ್ನೇಹಮೈತ್ರಿ ಬ್ಲಡ್ ಆರ್ಮಿ, ಅಕ್ಕಿಆಲೂರ ಹಾಗೂ ಯುವ ಬ್ಲಡ್ ಡೋನರ್ಸ್‌ ಅಸೋಸಿಯೇಶನ್ಸ್, ಹಾವೇರಿ ಸಂಘ ಸಂಸ್ಥೆಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಕೇಂದ್ರದ ಸಹಾಯಕ ವಿರಾಜ ಸುಣಗಾರ, ಕಾಲೇಜಿನ ಸಹ ಪ್ರಾಧ್ಯಾಪಕ ಹೇಮಂತ.ಸಿ.ಎನ್., ಉಪನ್ಯಾಸಕರಾದ ಶ್ರೀದೇವಿ, ನಯನಾ, ಡಾ.ವಿ.ಜಯಲಕ್ಷ್ಮೀ, ಸತೀಶ ಹೊಸಮನಿ, ಮಂಜುನಾಥ ಟಿ.ಬಿ, ಮಂಜುನಾಥ ಹಟ್ಟಿ, ಬಸವರಾಜ ಕಮತದ, ಮತ್ತಿತರರು ಉಪಸ್ಥಿತರಿದ್ದರು.

ಚರ್ಚಾ ಸ್ಪರ್ಧೆ ವಿಜೇತರಿವರು
ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತದಾನದ ಮಹತ್ವದ ಕುರಿತು ನಡೆದ ಚರ್ಚಾಸ್ಪರ್ಧೆಯಲ್ಲಿ 11 ಪದವಿ ಕಾಲೇಜಿನಿಂದ 19 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಶಿಗ್ಗಾಂವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ನಾಗಮ್ಮ ತಿಮ್ಮಣ್ಣವರ ಪ್ರಥಮ ಸ್ಥಾನ (2 ಸಾವಿರ ರೂ. ನಗದು ಬಹುಮಾನ), ಅಕ್ಕಿಆಲೂರಿನ ಎಸ್‌ಟಿಎಸ್ ಪ್ರಥಮ ದರ್ಜೆ ಕಾಲೇಜಿನ ಬಿಎ ವಿದ್ಯಾರ್ಥಿ ಗಣೇಶ ಕಡಕೋಳ ದ್ವಿತೀಯ ಸ್ಥಾನ (ಒಂದೂವರೆ ಸಾವಿರ ರೂ. ನಗದು ಬಹುಮಾನ) ಹಾಗೂ ಹಾವೇರಿಯ ಕೆಎಲ್‌ಇ ಜಿಎಚ್ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಐಶ್ವರ್ಯ ಮಾನೆಗಾರ ತೃತೀಯ ಸ್ಥಾನ (ಒಂದೂವರೆ ಸಾವಿರ ರೂ. ಬಹುಮಾನ) ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net