

ಹಾವೇರಿ: ಭಾರತ ದೇಶ ಸ್ವಾತಂತ್ರ್ಯ ಹೊಂದುವಲ್ಲಿ ಮಾಡಿದ ಹೋರಾಟ, ಚಳವಳಿಗಳು ಅಷ್ಟಿಷ್ಟಲ್ಲ. ಅದೊಂದು ಇತಿಹಾಸ. ಭವ್ಯ ಭಾರತವನ್ನು ಕಟ್ಟುವಲ್ಲಿ ಅನೇಕ ಹುತಾತ್ಮರು ಪ್ರಾಮಾಣಿಕ ಕೊಡುಗೆ ನೀಡಿದ್ದಾರೆ. ಇಂದು ದೇಶ-ಭಾಷೆ-ಕೋಶಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನು ತಿಳಿಯಬೇಕಿದೆ ಎಂದು ಪದವಿ ಪ್ರಾಚಾರ್ಯೆ ಡಾ.ಸಂಧ್ಯಾ ಕುಲಕರ್ಣಿ ತಿಳಿಸಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತ ದೇಶ ವೈವಿಧ್ಯತೆಯ ನಾಡು. ಇಲ್ಲಿ ವಿವಿಧ ಧರ್ಮ, ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಭಾರತವು ಅವಕಾಶಗಳ ಭೂಮಿಯಾಗಿದೆ. ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಕೃಷಿ, ರಕ್ಷಣೆ ಮತ್ತು ಬಾಹ್ಯಾಕಾಶದಂತಹ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ಆದರೆ, ನಮ್ಮ ಸ್ವಾತಂತ್ರ್ಯವು ಒಂದು ದೊಡ್ಡ ಜವಾಬ್ದಾರಿಯೊಂದಿಗೆ ಬಂದಿದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಯಾವುದೇ ಬಾಹ್ಯ ಅಥವಾ ಆಂತರಿಕ ಬೆದರಿಕೆಗಳಿಂದ ನಾವು ನಮ್ಮ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ರಕ್ಷಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪದವಿಪೂರ್ವ ಪ್ರಾಚಾರ್ಯ ಡಾ.ಜ್ಯೋತಿಬಾ ಶಿಂಧೆ ಪ್ರಮಾಣ ವಚನ ಬೋಧಿಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ನಂತರ ಕಿರುಚಿತ್ರ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ ನಿರ್ಮಾಣದ ಹಾವೇರಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು ಚಿತ್ರ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್., ಎನ್.ಸಿ.ಸಿ., ಸ್ಕೌಟ್ಸ್ ಮತ್ತು ಗೈಡ್ಸ್, ಇಕೋಕ್ಲಬ್, ರೆಡ್ ರಿಬ್ಬನ್ ಘಟಕಗಳ ಅಧಿಕಾರಿಗಳು, ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ, ಕೆಡೆಟ್‌ಗಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಣ ನಿರ್ದೇಶಕಿ ಪೂಜಾ ಎಂ. ನಿರೂಪಿಸಿದರು.