

ಹಾವೇರಿ: ಜಿಲ್ಲಾಡಳಿತದಿಂದ ಅ.23ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿಯ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಅ.23ರಂದು ಜಿಲ್ಲೆಯಾದ್ಯಂತ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ತಹಸೀಲ್ದಾರ್ ಶರಣಮ್ಮ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಎಚ್.ಮಹೇಶಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ.ಚಿನ್ನಿಕಟ್ಟಿ, ಸಮಾಜದ ಪ್ರಮುಖರಾದ ಭುವನೇಶ್ವರ ಶಿಡ್ಲಾಪುರ, ಶಂಕರ ಬಿಸರಳ್ಳಿ, ದಾನೇಶಪ್ಪ ಕೆಂಗೊಂಡ, ಚನ್ನಮ್ಮ ಬ್ಯಾಡಗಿ, ಜಗದೀಶ ಕನವಳ್ಳಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.