

ಹಾವೇರಿ: ಇಲ್ಲಿನ ಶಿವಾಜಿ ನಗರದ ಎಲ್‌ಐಸಿ ಹಿಂಭಾಗದ ಶಿವಬಸಪ್ಪ ಇಂಗಳಗಿ ಹಾಗೂ ಭರಮಪ್ಪ ಕೂಲಿ ಅವರ ಹೊಲದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ರೈತರು ಎತ್ತಿನ ಗಾಡಿ ಏರಿ ಮಿಂಚಿನ ಓಟ ಪ್ರದರ್ಶಿಸಿದರು.
ಸ್ಪರ್ಧೆಗೆ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೂರಾರು ರೈತರು ಚಕ್ಕಡಿಯೊಂದಿಗೆ ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎತ್ತಿನ ಗಾಡಿಗಳ ಓಟ ವೀಕ್ಷಿಸಲು ಜನ ಕಿಕ್ಕಿರಿದು ಭಾಗವಹಿಸಿದ್ದರು. ಎತ್ತುಗಳ ವೇಗದ ಓಟ ಕಂಡು ಚಪ್ಪಾಳೆ, ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದರು.
ಪ್ರಥಮ ಹಾಗೂ ದ್ವಿತೀಯ ಬಹುಮಾನ ದ್ವಿಚಕ್ರ ವಾಹನ, ತೃತೀಯ ಬಹುಮಾನ 40 ಸಾವಿರ ರೂ., ನಾಲ್ಕನೇ ಬಹುಮಾನ 30 ಸಾವಿರ ರೂ. ಹಾಗೂ ಐದನೇ ಬಹುಮಾನ 20 ಸಾವಿರ ರೂ. ಸೇರಿ 21 ವಿಜೇತರಿಗೆ ವಿವಿಧ ನಗದು ಬಹುಮಾನ ನೀಡಿ ಗೌರವಿಸಲಾಯಿತು.