ಅಕ್ಷತಾರ ತೇಜೋವಧೆ ಮಾಡುವ ಹುನ್ನಾರ

Published on

ಹಾವೇರಿ: ಲಿಂಗತ್ವ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಷತಾ ಕೆ.ಸಿ ಅವರ ಬೆಳವಣಿಗೆ ಸಹಿಸದೇ ಅವರ ಬಗ್ಗೆ ತೇಜೋವಧೆ ಮಾಡುತ್ತಿರುವ ಸಂಗಮ ಸಂಸ್ಥೆ, ಯುಕೆಎಂಒ ಹಾಗೂ ಎನ್‌ಎನ್‌ಎಸ್‌ಡಬ್ಲ್ಯೂ ಸಂಸ್ಥೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟದ ಧಾರವಾಡ ಜಿಲ್ಲಾಧ್ಯಕ್ಷೆ ರಾಜರತ್ನಂ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಕಾನೂನು, ಸಂವಿಧಾನ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳ ಬಗ್ಗೆ, ಲಿಂಗತ್ವ , ಲೈಂಗಿಕತೆ, ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತ ಹಲವು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅಕ್ಷತಾ ಕೆ.ಸಿ. ಕೆಲಸ ಮಾಡುತ್ತಿದ್ದಾರೆ.
ಸ್ಪಂದನಾ ಮಹಿಳಾ ಒಕ್ಕೂಟದಲ್ಲಿ ಹಣ ದುರ್ಬಳಕೆ ಮಾಡಿರುವ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ಮಾನಸಿಕ ಹಿಂಸೆ ನೀಡಿ ಅಕ್ಷತಾ ಅವರ ಗೌರವಕ್ಕೆ ಮಸಿ ಬೆಳೆಯುವ ಕೆಲಸ ಮಾಡುತ್ತಿರುವುದು ಖಂಡನೀಯ. ಈ ಷಡ್ಯಂತ್ರದ ಹಿಂದಿರುವ ಪ್ರಮುಖರ ಮೇಲೆ ಹಾಗೂ ಭಿನ್ನಾಭಿಪ್ರಾಯ ಸೃಷ್ಟಿಸಿ ಸಂಘಟನೆಗಳನ್ನು ಒಡೆದಾಳುವ ನೀತಿ ಅನುಸರಿಸುತ್ತಿರುವ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಗೀತಾ ಸಿಂಗ್, ಆರ್.ಟಿ.ಜಯರೇಗೌಡ, ನಾಗು, ಅರುಂಧತಿ, ಪ್ರಾರ್ಥನಾ, ದಿಲ್‌ಫರಾಜ್, ಆರತಿ, ದೀಕ್ಷಾ, ಪ್ರಾರ್ಥನಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net