ಕಗ್ಗಂಟಾದ ಸಾಹಿತ್ಯ ಸಮ್ಮೇಳನ ದಿನಾಂಕ; ಡಿಸೆಂಬರ್, ಜನವರಿಯಲ್ಲಿ ಸಾಧ್ಯತೆ

11 HVR 3 A
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಯಾಲಕ್ಕಿ ನಾಡು ಹಾವೇರಿಯಲ್ಲಿ ನ.11ರಿಂದ 13ರವರೆಗೆ ಅದ್ಧೂರಿಯಾಗಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದರಾದರೂ ಈವರೆಗೆ ಯಾವುದೇ ಅಗತ್ಯ ತಯಾರಿ ನಡೆಯದಿರುವ ಹಿನ್ನೆಲೆಯಲ್ಲಿ ಈ ದಿನಾಂಕದಂದು ಸಮ್ಮೇಳನ ನಡೆಯುವುದಿಲ್ಲ ಎಂಬುದು ಖಚಿತವಾದಂತಾಗಿದೆ. ಈ ದಿನಾಂಕದಂದು ಸಮ್ಮೇಳನ ಅಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ, ಇದೇ ದಿನಾಂಕದಂದು ಸಮ್ಮೇಳನ ನಡೆಸುವುದಾಗಿ ಸಿಎಂ ಹೇಳಿಕೊಂಡಿದ್ದರು. ಜಿಲ್ಲೆಯಲ್ಲಿ ಈಗ ಮತ್ತೆ ವರುಣನ ಹಬ್ಬರ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನ ದಿನಾಂಕ ಸರ್ಕಾರ ಮತ್ತು ಕಸಾಪಕ್ಕೆ ಕಗ್ಗಂಟಾಗಿ ಪರಿಣಮಿಸಿದೆ.
ಸಮ್ಮೇಳನ ನಡೆಸಲು ಕನಿಷ್ಠ ಎರಡು ತಿಂಗಳು ಕಾಲಾವಕಾಶ ಬೇಕು. ಅನುದಾನ ಬಿಡುಗಡೆಯಾಗಬೇಕು. ಸ್ವಾಗತ ಸಮಿತಿ ಸೇರಿ 20 ಸಮಿತಿಗಳು ಕಾರ್ಯಾರಂಭಿಸಬೇಕು. ಈಗಾಗಲೇ ಸಮ್ಮೇಳನದ ಸ್ವಾಗತ ಸಮಿತಿ ರಚನೆಯಾಗಿದ್ದರೂ ಕೆಲಸ ಶುರುವಾಗಿಲ್ಲ. ಸಮ್ಮೇಳನ ನಡೆಸಲು ತೀರ್ಮಾನಿಸಿರುವ ಇಜಾರಿಲಕಮಾಪುರದ ಜಿಎಚ್ ಕಾಲೇಜು ಬಳಿಯ 25 ಎಕರೆ ಜಾಗ ಹದಗೊಳಿಸುವ ಕಾರ್ಯಕ್ಕೇ ಕನಿಷ್ಠ 20ರಿಂದ 30 ದಿನ ಬೇಕು. 19 ಎಕರೆ ಮೈದಾನವಿದ್ದು, ಕೆಸರಿನಿಂದ ಕೂಡಿದೆ. ಉಳಿದ ಐದು ಎಕರೆ ಹೊಲ ಸಮ್ಮೇಳನಕ್ಕೆ ನೀಡಲು ಹೊಲದ ಮಾಲೀಕರು ಒಪ್ಪಿಕೊಂಡಿದ್ದಾರಾದರೂ, ಅಲ್ಲಿ ಬಿತ್ತನೆ ಮಾಡಲಾಗಿದೆ. ಬೆಳೆ, ಕಳೆ ತೆಗೆದು ಸ್ವಚ್ಛಗೊಳಿಸಲು ಕನಿಷ್ಠ 15ರಿಂದ 20 ದಿನ ಬೇಕು.
ಉಳಿದಂತೆ ತಿಂಗಳ ಮುಂಚೆಯೇ ಅತಿಥಿಗಳು, ಗಣ್ಯರು ಸೇರಿ 3 ಲಕ್ಷಕ್ಕೂ ಅಧಿಕ ಕಸಾಪ ಸದಸ್ಯರಿಗೆ ಆಹ್ವಾನ ಪತ್ರಿಕೆ ಕಳುಹಿಸಬೇಕು. ಮುಖ್ಯವಾಗಿ ಊಟ, ವಸತಿ ಸಮಸ್ಯೆ ಬಗೆಹರಿಸಬೇಕು. ನಗರದ ರಸ್ತೆಗಳನ್ನು ದುರಸ್ತಿಪಡಿಸಬೇಕು. ಇಂತಹ ಹಲವು ಕೆಲಸಗಳು ಬಾಕಿ ಇವೆ. ಹಾಗಾಗಿ, ಅ.12ರಂದು ನಡೆಯಲಿರುವ ಸಭೆಯಲ್ಲಿ ಮಳೆ, ಮತ್ತಿತರ ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸಮ್ಮೇಳನ ದಿನಾಂಕ ನಿಗದಿಪಡಿಸಬೇಕು. ಕೇವಲ ದಿನಾಂಕ ನಿಗದಿಪಡಿಸಿದರೆ ಸಾಲದು, ಕೂಡಲೇ ಅನುದಾನ ಬಿಡುಗಡೆ ಮಾಡಿ, ಸಮ್ಮೇಳನ ಕೆಲಸಕ್ಕೆ ತಕ್ಷಣ ಚಾಲನೆ ನೀಡಬೇಕು. ಹಾವೇರಿಯಲ್ಲಿ ಸ್ವಾಗತ ಸಮಿತಿ ಸಭೆ ಸೇರಿ ಎಲ್ಲ ಉಪಸಮಿತಿಗಳ ಚಟುವಟಿಕೆ ಆರಂಭಿಸಬೇಕು ಎಂಬುದು ಸಾಹಿತ್ಯ ಪ್ರೇಮಿಗಳ ಆಗ್ರಹವಾಗಿದೆ.

ಮಹತ್ವದ ಸಭೆ ಇಂದು
ಸಾಹಿತ್ಯ ಸಮ್ಮೇಳನದ ಗೊಂದಲಗಳನ್ನು ನಿವಾರಿಸಲೆಂದು ಸಿಎಂ ಸೂಚನೆ ಮೇರೆಗೆ ಅ.12ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲಕುಮಾರ ಅಧ್ಯಕ್ಷತೆಯಲ್ಲಿ ಮಹತ್ವದ ಪೂರ್ವಬಾವಿ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಸಚಿವ ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ, ಶಾಸಕರಾದ ನೆಹರು ಓಲೇಕಾರ, ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ನೂತನ ದಿನಾಂಕ ಘೋಷಣೆ ಸಾಧ್ಯತೆ ಇದ್ದು, ಪೂರ್ವಬಾವಿ ತಯಾರಿ ಕುರಿತು ಚರ್ಚಿಸಲಾಗುತ್ತದೆ.

ಅ.12ರ ಸಮ್ಮೇಳನ ಪೂರ್ವಬಾವಿ ಸಭೆಯಲ್ಲಿ ಹೊಸ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ದಿನಾಂಕ ಘೋಷಣೆಯಾದ ಕೂಡಲೇ ಲಾಂಛನ ಹಾಗೂ ಅನುದಾನ ಬಿಡುಗಡೆಯಾಗಬೇಕು. ತಕ್ಷಣವೇ ಪೂರ್ವ ತಯಾರಿ ಆರಂಭವಾಗಬೇಕು.
ಡಾ.ಮಹೇಶ ಜೋಶಿ, ಕಸಾಪ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net