ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ 5 ಲಕ್ಷ ಅನುದಾನ; ಅಂದಾಜು ವೆಚ್ಚ 12ರಿಂದ 15 ಲಕ್ಷ ರೂ.; ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿಕೆ

Kasapaa
Published on

ಹಾವೇರಿ: ರಾಣೆಬೆನ್ನೂರಿನಲ್ಲಿ ಫೆ.11 ಮತ್ತು 12ರಂದು ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಆಯೋಜಿಸಿರುವ 13ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಒಂದೆರೆಡು ದಿನದಲ್ಲಿ ಐದು ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಹಾವೇರಿಯಲ್ಲಿ ನಡೆದಿದ್ದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ 13 ಲಕ್ಷ ಖರ್ಚಾಗಿತ್ತು. ರಾಣೆಬೆನ್ನೂರ ಸಮ್ಮೇಳನದಲ್ಲಿ 12ರಿಂದ 15 ಲಕ್ಷ ರೂ. ಅಂದಾಜು ವೆಚ್ಚ ಪಟ್ಟಿ ಸಿದ್ಧಪಡಿಸಲಾಗಿದೆ. ಕಸಾಪದಿಂದ 5 ಲಕ್ಷ ಅನುದಾನ ಸಿಗಲಿದ್ದು, ಉಳಿದ ಹಣವನ್ನು ಸ್ಥಳೀಯ ಸ್ವಾಗತ ಸಮಿತಿ ದಾನಿಗಳಿಂದ ಭರಿಸಲಿದೆ ಎಂದರು.
ಫೆ.11ರಂದು ಬೆಳಗ್ಗೆ 7.30ಕ್ಕೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಧ್ವಜಾರೋಹಣ ನೆರವೇರಿಸುವರು. ಬೆಳಗ್ಗೆ 8 ಗಂಟೆಗೆ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ಆರಂಭವಾಗಲಿದೆ. 13ನೇ ಸಮ್ಮೇಳನದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಯಾರೂ ಗೊಂದಲಕ್ಕೆ ಈಡಾಗದೇ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೆ ಸರಿಪಡಿಸಿಕೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಎನ್.ದೊಡ್ಡಗೌಡರ, ಪೃಥ್ವಿರಾಜ ಬೆಟಗೇರಿ, ಪ್ರಭು ಹಿಟ್ನಳ್ಳಿ, ಗೂಳಪ್ಪ ಅರಳಿಕಟ್ಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net