

ಹಾವೇರಿ: ಕನ್ನಡ ಉಳಿಸಿ, ಬೆಳೆಸಿ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂದು ಹೇಳುವುದನ್ನು ಕೆಲವರು ಮರೆಯುತ್ತಾರೆ. ಕನ್ನಡಕ್ಕೆ ನೀವು ಏನಾದರೂ ಕೊಡುಗೆ ನೀಡಬೇಕು ಎಂದರೆ ಕೊನೇ ಪಕ್ಷ ಒಂದು ಕನ್ನಡ ದಿನಪತ್ರಿಕೆಯನ್ನು ಮನೆಗೆ ತರಿಸಿಕೊಂಡು ಓದಿ. ಇಲ್ಲವೇ ನಿಮ್ಮ ಪ್ರದೇಶದ ಕನ್ನಡ ಸೊಗಡಿನಲ್ಲಿ ಮಾತನಾಡಿ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಕರೆ ನೀಡಿದರು.
ವಿನಾಯಕ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತಿ ಕಲಾವಿದರ ಬಳಗದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ಆಯೋಜಿಸಿದ್ದ ಕನ್ನಡ ಸಂಜೆಗಳು ಸರಣಿ ಕಾರ್ಯಕ್ರಮದಲ್ಲಿ ಮಂಗಳವಾರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜತೆಗೆ ಕನ್ನಡದಲ್ಲಿ ಸಹಿ ಮಾಡುವುದನ್ನು ಕಲಿಯಿರಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಆರ್.ಹಿರೇಮಠ ಮಾತನಾಡಿ, ಮನೆಯಲ್ಲಿ ಮಕ್ಕಳ ಎದುರಲ್ಲಿ ಶುದ್ಧ ಕನ್ನಡದಲ್ಲಿ ಮಾತನಾಡುವ ವಾತಾವರಣ ನಿರ್ಮಿಸಿ. ಮನೆಯಿಂದಲೇ ಕನ್ನಡ ಹುಟ್ಟಬೇಕು. ಕನ್ನಡ ಕೆಲಸಕ್ಕೆ ಸದಾ ಕೈ ಜೋಡಿಸುವ ಮನೋಬಾವ ಬೆಳಸಿಕೊಳ್ಳಬೇಕು ಎಂದರು.
ಲೇಖಕರಾದ ಹನುಮಂತಗೌಡ ಗೊಲ್ಲರ, ಮಹಾದೇವ ಕರಿಯಣ್ಣನವರ, ಸಿ.ಎಸ್.ಮರಳಿಹಳ್ಳಿ, ಇತರರು ಉಪಸ್ಥಿತರಿದ್ದರು.
ಹಲವರಿಗೆ ಸನ್ಮಾನ
ಗಂಗಾಧರ ನಂದಿ ಸಾಹಿತ್ಯ ಭವನ ನಿರ್ಮಾಣಕ್ಕೆ ದೇಣಿಗೆ ನೀಡಿದ ರಾಣೆಬೆನ್ನೂರಿನ ಕನ್ನಡಾಭಿಮಾನಿಗಳಾದ ಜಿ.ಜಿ.ಹೊಟ್ಟಿಗೌಡ್ರ, ಎಂ.ಎಸ್.ಅರಕೇರಿ, ಶಿವಾನಂದ ಸುಣಗಾರ, ಮಾಲತೇಶ ಕಜ್ಜರಿ, ಜಯರಾಮ ಶೆಟ್ಟರ್, ಎಂ.ಎಸ್.ಪಟ್ಟಣಶೆಟ್ಟಿ, ವೀರೇಶ ಜಂಬಗಿ, ಹಾವೇರಿಯ ಬಿ.ಪಿ.ಪಾಟೀಲ ಅವರನ್ನು ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮತ್ತು ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ ಸನ್ಮಾನಿಸಿದರು.