

ಹಾವೇರಿ: ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಮೊದಲಿನಿಂದಲೂ ವಿನೂತನ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ ಬಂದಿದೆ. ಮೊದಲು ರಾಜಾಶ್ರಯದಲ್ಲಿ ಸಾಹಿತ್ಯ ಬೆಳೆದು ಜೀವಪರ ಮೌಲ್ಯ ಹಂಚಿದರೆ ಇಂದು ಸಾಹಿತ್ಯ ಜನರಿಂದ ಜನರಿಗಾಗಿ ಜನರಿಂದ ಬರೆಯಲ್ಪಟ್ಟು ವರ್ತಮಾನದ ತಲ್ಲಣಗಳಿಗೆ ಧ್ವನಿಯಾಗಿದೆ ಎಂದು ಹನುಮನಮಟ್ಟಿ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಪುಷ್ಪಾ ಶಲವಡಿಮಠ ಹೇಳಿದರು.
ನಗರದ ರಾಚೋಟೇಶ್ವರ ಪ.ಪೂ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಯೋಧ ಗುರುಶಾಂತಪ್ಪ ಜಾಬೀನ ಅವರ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸನಗಳಿಂದ ಪ್ರಾರಂಭವಾಗುವ ಅಂದಿನ ಸಾಹಿತ್ಯ ಚಂಪು, ವಚನ, ಸ್ವರವಚನ, ಬೆಡಗಿನ ವಚನ, ಕಾಲಜ್ಞಾನ ವಚನ, ರಗಳೆ, ತ್ರಿಪದಿ, ಷಟ್ಪದಿ, ಕೀರ್ತನೆ, ಸುಳಾದಿ, ಉಗಾಭೋಗ, ಸಾಂಗತ್ಯ, ತತ್ವಪದ, ಭಜನಾಪದ, ತಾರವಳಿ, ಹಲವು ಪ್ರಕಾರಗಳಲ್ಲಿ ಅರಳಿ, ಇಂದು ಕಾವ್ಯ, ಮಹಾಕಾವ್ಯ, ಸಣ್ಣ ಕಥೆ, ಕಾದಂಬರಿ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಅಂಕಣ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಅನುವಾದ, ಸಂಶೋಧನೆ, ವೈಚಾರಿಕ ಸಾಹಿತ್ಯ, ಹನಿಗವನ, ಮುಕ್ತಕ, ತನಗ, ಹೈಕು, ರುಬಾಯಿ, ತಂಕಾ, ಬದರ್, ಗಜಲ್, ಮುಂತಾದ ಕಾವ್ಯ ಪ್ರಯೋಗ ಕಾವ್ಯಗಳನ್ನು ಕನ್ನಡ ಸಾಹಿತ್ಯದಲ್ಲಿ ಕಾಣಬಹುದು. ಇಂತಹ ಅಗಾಧ ಸಾಹಿತ್ಯ ಪ್ರಕಾರ ಜಗತ್ತಿನ ಬೇರೆ ಯಾವ ಸಾಹಿತ್ಯದಲ್ಲಿಯೂ ಇಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎನ್. ದೊಡ್ಡಗೌಡರ ಮಾತನಾಡಿ, ಮಹಾಕಾವ್ಯ ಯುಗ ಮುಗಿಯಿತು ಅನ್ನೋ ಹೊತ್ತಿಗೆ ಕುವೆಂಪು ಶ್ರೀ ರಾಮಾಯಣ ದರ್ಶನಂ, ವಿ.ಕೃ. ಗೋಕಾಕ್ ಅವರ ಭಾರತ ಸಿಂಧು ರಶ್ಮಿ, ಭೂಸನೂರುಮಠ ಅವರ ಭವ್ಯ ಮಾನವ, ಚನ್ನಣ್ಣ ವಾಲಿಕಾರ್ ಅವರ ಯೋಮಾಯೋಮ, ಲತಾ ರಾಜಶೇಖರವರ ನಾಲ್ಕು ಮಹಾಕಾವ್ಯಗಳು ಸಾಹಿತ್ಯ ಲೋಕ ಬೆಳಗಿವೆ. ಇಂದು ಕನ್ನಡದಲ್ಲಿ ಬರುವಷ್ಟು ಸಾಹಿತ್ಯ ಕೃತಿಗಳು ಬೇರೆ ಯಾವುದೇ ಭಾಷೆಯಲ್ಲಿ ಬರುತ್ತಿಲ್ಲ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಕಸಾಪ ಅದ್ಯಕ್ಷ ವೈ.ಬಿ.ಆಲದಕಟ್ಟಿ ಮಾತನಾಡಿದರು.
ಸಮಾರಂಭದಲ್ಲಿ ಲಲಿತಮ್ಮ ಜಾಬೀನ, ಪ್ರಾಚಾರ್ಯ ಎಸ್.ವಿ.ಹಿರೇಮಠ, ಭರತರಾಜ ಹಜಾರೆ, ಮಹಾಂತಪ್ಪ ಹಲಗಣ್ಣನವರ, ನಗರಸಭೆ ಸದಸ್ಯ ಮಲ್ಲಿಕಾರ್ಜುನ ಸಾತೇನಹಳ್ಳಿ, ಶಿವಬಸಪ್ಪ ಜಾಬೀನ, ಎಸ್.ಆರ್.ಹಿರೇಮಠ, ಸಿ.ಎಸ್.ಮರಳಿಹಳ್ಳಿ, ಅಕ್ಕಮಹಾದೇವಿ ಹಾನಗಲ್ಲ, ಲಲಿತಾ ಪಾಟೀಲ, ಜಿ.ಎನ್.ಹೂಗಾರ, ಅಲ್ಲಾಭಕ್ಷ ದೇವಿಹೊಸೂರ, ಮತ್ತಿತರರು ಉಪಸ್ಥಿತರಿದ್ದರು.
ಕೆ.ಬಿ.ಭಿಕ್ಷಾವರ್ತಿಮಠ ದತ್ತಿದಾನಿಗಳ ಪರಿಚಯ ಮಾಡಿದರು. ಈರಣ್ಣ ಬೆಳವಡಿ ಸ್ವಾಗತಿಸಿದರು. ರೇಣುಕಾ ಗುಡಿಮನಿ ವಂದಿಸಿದರು, ಎಸ್.ಎಂ. ಬಡಿಗೇರ ನಿರೂಪಿಸಿದರು.