ಕನ್ನಡ ಭಾಷೆಯ ಸಮೃದ್ಧಿಗೆ ಶ್ರಮಿಸಿದ ಕಸಾಪ; ಸಾಹಿತ್ಯ ಪರಿಷತ್ 111ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಲಿಂಗಯ್ಯ ಹಿರೇಮಠ ಅಭಿಪ್ರಾಯ

5 HVR 4
Published on

ಹಾವೇರಿ: ಕನ್ನಡ ನಾಡಿನ ನೆಲ, ಜಲ ಮತ್ತು ಭಾಷೆಯ ಸಮೃದ್ಧಿಗೆ ಶ್ರಮಿಸಿದ ಶ್ರೇಯಸ್ಸು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ನಾಡಿಗೆ ಸಂಬಂಧಿಸಿದಂತೆ ಪ್ರಕಟಣೆ, ಸಂಶೋಧನೆ, ನಿಘಂಟು ರಚನೆ ಮಾಡಿ ಮುಂದಿನ ಪೀಳಿಗೆಗೆ ಮಹತ್ತರ ಮೈಲಿಗಲ್ಲು ರೂಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕ್ರಿಯಾಶೀಲ ಚಟುವಟಿಕೆಯಿಂದ ಗುರುತಿಸಿಕೊಂಡಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಧ್ಯಾಪಕ ಡಾ.ಸಂಜೀವ ನಾಯಕ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್.ಎಂ ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಸದಾ ಸ್ಮರಣೀಯರು. ಅವರ ದೂರದೃಷ್ಟಿಯ ಚಿಂತನೆಯ ಫಲವಾಗಿ ಕಸಾಪ ದೀರ್ಘಕಾಲ ಸಾಗಿ ಬಂದಿದೆ ಎಂದರು.

ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪುರ, ಕನ್ನಡದ ಅಸ್ಮಿತೆಗೆ ತನ್ನನ್ನು ಅರ್ಪಿಸಿಕೊಂಡಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಅನೇಕರು ಶ್ರಮಿಸಿದ್ದಾರೆ. ನಮ್ಮ ನೆಲದ ಚಂಪಾ ಮತ್ತು ವಿ.ಕೃ ಗೋಕಾಕ ಅವರು ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಕನ್ನಡದ ಅಭಿಮಾನವನ್ನು ಎಂದಿಗೂ ಮರೆಯಲಿಲ್ಲ. ಅವರೆಲ್ಲ ನಮಗೆ ಪ್ರೇರಣೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ವೈ.ಬಿ ಆಲದಕಟ್ಟಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್ ಕೋರಿಶೆಟ್ಟರ ಮಾತನಾಡಿದರು.

ಸುಲೋಚನಾ ನಂದಿ, ಡಾ.ವಿ.ಪಿ ದ್ಯಾಮಣ್ಣವರ, ಈರಣ್ಣ ಬೆಳವಡಿ, ಎಸ್.ಆರ್ ಹಿರೇಮಠ, ಹನುಮಂತಗೌಡ ಗೊಲ್ಲರ, ಸಿ.ಎಸ್ ಮರಳಿಹಳ್ಳಿ, ಪ್ರಭು ಹಿಟ್ನಳ್ಳಿ, ಸುಭಾಷ ಕುರುಬರ, ರಾಜೇಂದ್ರ ಹೆಗಡೆ, ಸಿದ್ದೇಶ್ವರ ಹುಣಸಿಕಟ್ಟಿಮಠ, ಶಕುಂತಲಾ ದಾಳೇರ, ರೇಣುಕಾ ಗುಡಿಮನಿ, ಅಕ್ಕಮಹಾದೇವಿ ಹಾನಗಲ್ಲ, ಜುಬೇದಾ ನಾಯ್ಕ, ಡಾ.ಗೀತಾ ಸುತ್ತಕೋಟಿ, ಇತರರು ಉಪಸ್ಥಿತರಿದ್ದರು.

ಜಿ.ಎಂ ಓಂಕಾರಣ್ಣವರ ನಿರೂಪಿಸಿದರು. ಬಿ.ಪಿ ಶಿಡೇನೂರ ಸ್ವಾಗತಿಸಿದರು. ಅರಳಿಕಟ್ಟಿ ಗೂಳಪ್ಪ ವಂದಿಸಿದರು.

ಸಾಮಸ್ಕೃತಿಕ ವಾತಾವರಣ ಸೃಷ್ಟಿ

ಜಾತ್ಯತೀತ ಮೌಲ್ಯಗಳನ್ನು ಪ್ರತಿಪಾದಿಸುವ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಜಿಲ್ಲೆಯಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಸಾಹಿತ್ಯಕ ಹಾಗೂ ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿ ಗಮನ ಸೆಳೆದಿದೆ. ಇಂಥ ಚಟುವಟಿಕೆ ಮುಂದುವರೆಯಲಿ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಆಶಯ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net