ಪ್ರದೇಶಾಭಿವೃದ್ಧಿ ನಿಧಿ ಬಳಕೆಗೆ ಶಾಸಕರ ನಿರಾಸಕ್ತಿ !; ಹಿಂದಿನ ಅವಧಿಯಲ್ಲಿ ಚಿಕ್ಕಮಗಳೂರು, ಬೆಂ.ಗ್ರಾ, ಕೊಡಗು ಶಾಸಕರು ಮುಂದೆ; ಶೇ.66.34ರಷ್ಟು ಮಾತ್ರ ಸಾಧನೆ

MLA Fund Story
Published on

ಕೇಶವಮೂರ್ತಿ ವಿ.ಬಿ. ಹಾವೇರಿ
ರಾಜ್ಯ ವಿಧಾನಸಭೆಯ 2018ರಿಂದ 2023ರ ವರೆಗಿನ ಶಾಸಕರ ಅಧಿಕಾರವಧಿ ಮುಕ್ತಾಯಗೊಂಡು ಆರು ತಿಂಗಳು ಕಳೆದಿದೆ. ಹೊಸ ಸರ್ಕಾರ ಬಂದು ಆರು ತಿಂಗಳಾಗಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ರಾಜ್ಯದ ಅನೇಕ ಶಾಸಕರು ತಮ್ಮ ಖಾತೆಯಲ್ಲಿರುವ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ನಿಧಿಯನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅನುಮೋದನೆಗೊಂಡ ಒಟ್ಟು 3,200 ಕೋಟಿ ರೂ.ನಲ್ಲಿ 1,749 ಕೋಟಿ ರೂ. ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಅನೇಕ ಶಾಸಕರು ಕೋಟ್ಯಂತರ ರೂ. ಅನುದಾನ ಬಾಕಿ ಉಳಿಸಿಕೊಂಡಿದ್ದಾರೆ.
ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಶೇ.92.43ರಷ್ಟು ಸಾಧನೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಶೇ.91.77, ಕೊಡಗು ಶೇ.88.25, ಉತ್ತರ ಕನ್ನಡ ಶೇ.87.27, ಹಾವೇರಿ ಶೇ.86.50, ಚಾಮರಾಜನಗರ ಶೇ.86.24, ಶಿವಮೊಗ್ಗ ಶೇ.83.03ರಷ್ಟು ಸಾಧನೆ ಮಾಡುವ ಮೂಲಕ ಈ ಜಿಲ್ಲೆಗಳ ಶಾಸಕರು ಮುಂಚೂಣಿಯಲ್ಲಿದ್ದಾರೆ.
ವಿಜಯನಗರ ಜಿಲ್ಲೆ ಕೇವಲ ಶೇ.9.59ರಷ್ಟು ಸಾಧನೆ ಮೂಲಕ ಕೊನೆಯ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ರಾಯಚೂರ ಶೇ.22.68, ಬೆಳಗಾವಿ ಶೇ.27.92, ಬಳ್ಳಾರಿ ಶೇ.30.04, ಯಾದಗಿರಿ ಶೇ.35.55, ಕೊಪ್ಪಳ ಶೇ.45.76 ಕಲಬುರಗಿ ಶೇ.55.31ರಷ್ಟು ಸಾಧನೆ ಮೂಲಕ ಈ ಜಿಲ್ಲೆಗಳ ಹಿಂದಿನ ಶಾಸಕರು ಹಿಂದೆ ಉಳಿದಿದ್ದಾರೆ.
ಕಳೆದ ಅವಧಿಯಲ್ಲಿ 31 ಜಿಲ್ಲೆಗಳಿಂದ ಒಟ್ಟು 75,501 ಕಾಮಗಾರಿಗಳಿಗೆ ಅನುಮೋದನೆ ನೀಡಿ, 3,204 ಕೋಟಿ ರೂ. ಅಂದಾಜು ವೆಚ್ಚ ಸಿದ್ಧಪಡಿಸಲಾಗಿತ್ತು. ಆ ಪೈಕಿ 1,749 ಕೋಟಿ ರೂ. ವೆಚ್ಚದ 50,091 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. ಉಳಿದಂತೆ 1,178 ಕೋಟಿ ರೂ. ವೆಚ್ಚದ 25,415 ಕಾಮಗಾರಿಗಳು ಪ್ರಗತಿಯಲ್ಲಿವೆ. ಶೇ.66.34ರಷ್ಟು ಮಾತ್ರ ಸಾಧನೆ ಆಗಿದೆ. ಬಾಕ್ಸ್
ವರ್ಷಕ್ಕೆ ಎರಡು ಕೋಟಿ ಅನುದಾನ
ಪ್ರತಿಯೊಬ್ಬ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಸರ್ಕಾರ ವರ್ಷಕ್ಕೆ ತಲಾ ಎರಡು ಕೋಟಿ ರೂ. ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆ ಮಾಡುತ್ತದೆ. ಈ ಅನುದಾನವನ್ನು ಶಾಸಕರು ರಸ್ತೆ, ಶುದ್ಧ ಕುಡಿಯುವ ನೀರು, ಸಭಾಭವನ, ಆಂಬುಲೆನ್ಸ್, ಅಂಗವಿಕಲರಿಗೆ ಸಾಮಗ್ರಿಗಳು, ಆಸ್ಪತ್ರೆ, ಶಾಲೆ, ದೇವಸ್ಥಾನ, ಮಂದಿರ ಸೇರಿ ವಿವಿಧ ಸಾರ್ವಜನಿಕರ ಅನುಕೂಲಕ್ಕೆ ಈ ಅನುದಾನ ಬಳಕೆ ಮಾಡಿಕೊಳ್ಳಲು ಶಿಫಾರಸ್ಸು ಮಾಡಬಹುದಾಗಿದೆ.
ಅಧಿವೇಶನದಲ್ಲಿ ಚರ್ಚೆಯಾಗಲಿ
ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಘೀಳಿಡುವ ಅನೇಕ ಶಾಸಕರೇ ತಮ್ಮ ಅಧೀನದಲ್ಲಿರುವ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಹಾಗಾಗಿ, ಪ್ರದೇಶಾಭಿವೃದ್ಧಿ ನಿಧಿಯ ಸದ್ಬಳಕೆ ಬಗ್ಗೆ ಬೆಳಗಾವಿಯ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆಸಬೇಕು. ಶಾಸಕರ ನಿಧಿ ಸಮರ್ಪಕ ಬಳಕೆ ಮಾಡುವ ನಿಟ್ಟಿನಲ್ಲಿ ಅವಲೋಕಿಸಿ ವಿಧೇಯಕ ಮಂಡಿಸಬೇಕು ಎಂಬುದು ‘ವಿಜಯವಾಣಿ’ ಕಳಕಳಿ.
ಕೋಟ್
ಕಳೆದ ಅವಧಿಯಲ್ಲಿ ಹಾವೇರಿ ಜಿಲ್ಲೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಶೇ.86.50ರಷ್ಟು ಅನುದಾನ ಬಳಕೆ ಮಾಡಿಕೊಂಡಿದೆ. ಇನ್ನೂ ಕೆಲ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಪೂಜಾರ ವೀರಮಲ್ಲಪ್ಪ, ಅಪರ ಜಿಲ್ಲಾಧಿಕಾರಿ, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net