

ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ಕಾರಹುಣ್ಣಿಮೆ ಮಹೋತ್ಸವದ ಅಂಗವಾಗಿ ಗುರುವಾರ ಕರಕ್ಕಿ ಬಂಡಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಬಂಡಿಗಳ ಓಟ ಮತ್ತು ವೀರಗಾರರನ್ನು ನೋಡಲು ಕಿಕ್ಕಿರಿದು ತುಂಬಿದ್ದ ಜನಸ್ತೋಮ ಕಂಡು ಎತ್ತಿನ ಬಂಡಿಗಳು ಶರವೇಗದಲ್ಲಿ ಓಡುವ ಮೂಲಕ ಗ್ರಾಮದ ತುಂಬ ಹಬ್ಬದ ಕಳೆಗಟ್ಟಿತ್ತು.
ಕಾರ ಹುಣ್ಣಿಮೆಯನ್ನು ಗ್ರಾಮದಲ್ಲಿ ಹಲವು ವರ್ಷಗಳಿಂದ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಮಂಗಳವಾರ ಹೊನ್ನುಗ್ಗಿ, ಬುಧವಾರ ದೊಡ್ಡಬಂಡಿ ಉತ್ಸವ ನಡೆದಿತ್ತು. ಗುರುವಾರ ವಿಶೇಷವಾಗಿ ಕರಕ್ಕಿ ಬಂಡಿ ಉತ್ಸವ ಅದ್ಧೂರಿಯಾಗಿ ಜರುಗಿತು.
ಸಣ್ಣ ಬಂಡಿ ಓಟಕ್ಕೆ ಸಣ್ಣ ಕರುಗಳನ್ನು ಹೂಡಲಾಗಿತ್ತು. ಅತ್ಯಾಕರ್ಷಕ ಅಲಂಕೃತ ಸಣ್ಣ ಎತ್ತುಗಳು ಓಡುವ ನೋಟ ಎಲ್ಲರ ಗಮನ ಸೆಳೆಯಿತು. ದೊಡ್ಡ ಎತ್ತುಗಳನ್ನು ಹೂಡಿ ಓಡಿಸುವ ದುಂಡಿತತ್ತರ ಬಂಡಿ ನೋಡುಗರ ಗಮನ ಸೆಳೆಯಿತು. ವಿವಿಧ ಬಗೆಯ ಎತ್ತುಗಳನ್ನು ಕಟ್ಟಿ ಓಡಿಸಲಾಯಿತು. ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯ ವೈಭವಗಳೊಂದಿಗೆ ಅಲಂಕೃತ ಎತ್ತುಗಳ ಮೆರವಣಿಗೆ ಸಂಭ್ರಮದಿಂದ ನಡೆಯಿತು. ಮೆರವಣಿಗೆಯಲ್ಲಿ ಯುವಕರು, ಮಕ್ಕಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು.
ಕರಕ್ಕಿಬಟ್ಟು ಎಂದು ಕರೆಯುವ ಕೊನೆಯ ಎರಡು ಬಂಡಿಗಳ ಓಟ ಆಕರ್ಷಣೀಯವಾಗಿತ್ತು. ಬಂಡಿಯನ್ನು ಎಳೆದುಕೊಂಡು ಎತ್ತುಗಳು ಓಡುತ್ತಿದ್ದವು. ಈ ವೇಳೆ ಯುವಕರು ಶಿಳ್ಳೆ, ಕೇಕೆ, ಚಪ್ಪಾಳೆ ಹಾಕುತ್ತ ಬಂಡಿಯ ವೇಗ ಹೆಚ್ಚಿಸಲು ಎತ್ತುಗಳನ್ನು ಹುರಿದುಂಬಿಸುತ್ತಿದ್ದ ದೃಶ್ಯ ಕಂಡುಬಂತು. ಸುತ್ತಮುತ್ತ ಗ್ರಾಮಗಳ ಸಾವಿರಾರು ಜನರು ಉತ್ಸವ ಕಣ್ತುಂಬಿಕೊಂಡರು.
ಕಣ್ಣಿಗೆ ಬಟ್ಟೆ ಧರಿಸಿ ಹೂರಣ ಸೇವೆ
ಭಕ್ತರು ಶ್ರೀ ಬ್ರಹ್ಮಲಿಂಗೇಶ್ವರನಿಗೆ ವಿಶೇಷ ಪೂಜೆ ನೆರವೇರಿಸಿದರು. ರಾತ್ರಿ ವೀರಗಾರರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಶ್ರೀ ಶ್ರೀ ಬ್ರಹ್ಮಲಿಂಗೇಶ್ವರ ದೇವರಿಗೆ ಹೂರಣ, ತುಪ್ಪ ಉಣ್ಣಿಸುವ ಕಾರ್ಯಕ್ರಮ ವೈಭವದಿಂದ ನಡೆಯಿತು.