ಕರ್ಜಗಿ ಬಂಡಿ ಉತ್ಸವ ಕಣ್ತುಂಬಿಕೊಂಡ ಜನ

18 HVR 8
Published on

ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಶ್ರೀ ಬ್ರಹ್ಮಲಿಂಗೇಶ್ವರ ಜಾತ್ರೆ ಆರಂಭವಾಗಿದ್ದು ಬುಧವಾರ ದೊಡ್ಡ ಬಂಡಿ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಹಾವೇರಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಭಕ್ತರು ಗ್ರಾಮಕ್ಕೆ ಆಗಮಿಸಿದ್ದರು. ಕೊಬ್ಬಿದ ಹೋರಿಗಳನ್ನು ಕಟ್ಟಿಕೊಂಡ ಎತ್ತಿನ ಬಂಡಿಯ ಓಟ ನೋಡುಗರ ಮನಸೂರೆಗೊಳಿಸಿತು. ಬಂಡಿಯ ಮೇಲೇರಿ ವೀರಗಾರರು ಸವಾರಿ ಮಾಡಿದರು.

ಗ್ರಾಮದಲ್ಲಿ ಮಂಗಳವಾರ ಹೊನ್ನುಗ್ಗಿಯೊಂದಿಗೆ ಕಾರಹುಣ್ಣಿಮೆ ವೈಭವ ಪ್ರಾರಂಭಗೊಂಡಿದ್ದು, ನೇಗಿಲು ಮತ್ತು ವ್ಯವಸಾಯಕ್ಕೆ ಬಳಸುವ ಎಲ್ಲ ಸಾಮಗ್ರಿಗಳನ್ನು ಶೃಂಗರಿಸಿ ಪೂಜೆ ಸಲ್ಲಿಸಲಾಯಿತು. ಮನೆಯಲ್ಲಿ ಕರಿ ಕಂಬಳಿಯ ಗದ್ದುಗೆ ಮಾಡಿ ಎತ್ತನ್ನು ಪೂರ್ವಕ್ಕೆ ಮುಖ ಮಾಡಿ ನಿಲ್ಲಿಸಿ ಅದರ ಪಾದಕ್ಕೆ ಈ ವರ್ಷ ಮಳೆ-ಬೆಳೆ ಬಂಗಾರದಂತೆ ಬರಲಿ ಎಂದು ಹೊನ್ನು(ಬಂಗಾರ) ಮುಟ್ಟಿಸಿ ಪೂಜೆ ಮಾಡುವ ಮೂಲಕ ಹೊನ್ನುಗ್ಗಿ ಆಚರಿಸಲಾಯಿತು.

ಎರಡನೇ ದಿನ ಬುಧವಾರ ಸಂಭ್ರಮದಿಂದ ದೊಡ್ಡ ಬಂಡಿ ಉತ್ಸವ ನಡೆಯಿತು. ಈ ಬಂಡಿ ಓಟಕ್ಕಾಗಿ ರೈತರು ಬೆಳಗ್ಗೆಯಿಂದಲೇ ಎತ್ತು ಹಾಗೂ ಬಂಡಿಗಳಿಗೆ ಶೃಂಗರಿಸಿ ಸಿದ್ಧತೆ ಮಾಡಿದ್ದರು. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಬಂಡಿ ಓಟ ರಾತ್ರಿ 8 ಗಂಟೆಯವರೆಗೂ ನಡೆಯಿತು. ವಿಶಿಷ್ಟ ವೇಷಗಳ ಮೂಲಕ ಗಮನಸೆಳೆದ ವೀರಗಾರರು, ಬಂಡಿಗಳನ್ನೇರಿ ಬಂಡಿ ಓಟಕ್ಕೆ ರಂಗು ಮೂಡಿಸಿದರು.

ಬಂಡಿ ಓಟದ ಮುನ್ನ ಗ್ರಾಮದ ಆರಾಧ್ಯ ಬ್ರಹ್ಮಲಿಂಗೇಶ್ವರ ದೇವರಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಿಂಗರಿಸಿದ ಎತ್ತುಗಳಿಗೆ ಹೂಡಿದ ಬಂಡಿಗಳನ್ನು ಗ್ರಾಮ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ನಡೆದ ಬಂಡಿಯ ಓಟ ನೆರದ ಜನರನ್ನು ರೋಮಾಂಚಗೊಳಿಸಿತು.

ಇಂದು ಕರಕ್ಕಿ ಬಂಡಿ ವೈಭವ

ಕರ್ಜಗಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಉತ್ಸವದ ಪ್ರಮುಖ ಘಟ್ಟ ಕರಕ್ಕಿ ಬಂಡಿ ವೈಭವ ಜೂ.19ರಂದು ನಡೆಯಲಿದೆ. ಬಂಡಿಗೆ ಬುಧವಾರ ಹುಟ್ಟಿದ ಕರುವನ್ನು ಹೂಡಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಿ ಸಂಜೆ 6 ಗಂಟೆವರೆಗೂ ಉತ್ಸವ ನಡೆಯುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net