

ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಅಂಗವಾಗಿ ಆಯೋಜಿಸಿದ್ದ ಶ್ರೀ ಬ್ರಹ್ಮಲಿಂಗೇಶ್ವರ ಮಹೋತ್ಸವ ಹಾಗೂ ಬಂಡಿ ಉತ್ಸವ ಗುರುವಾರ ಭಾರಿ ಜನಸ್ತೋಮದ ನಡುವೆ ವಿಜೃಂಭಣೆಯಿಂದ ಜರುಗಿತು.
ಕಾರಹುಣ್ಣಿಮೆ ಹಬ್ಬದ ಮೊದಲ ದಿನ ಮಂಗಳವಾರ ಹೊನ್ನುಗ್ಗಿ, ಬುಧವಾರ ದೊಡ್ಡಬಂಡಿ ಉತ್ಸವ ನಡೆದಿತ್ತು. ಗುರುವಾರ ಕರಕ್ಕಿ ಬಂಡಿ ಉತ್ಸವ ಅದ್ಧೂರಿಯಾಗಿ ನಡೆಯಿತು. ಗುರುವಾರ ಬೆಳಗ್ಗೆ ಸಣ್ಣ ಬಂಡಿ ಓಟಕ್ಕೆ ಸಣ್ಣ ಕರುಗಳನ್ನು ಹೂಡಲಾಗಿತ್ತು. ನಂತರ ದೊಡ್ಡ ಎತ್ತುಗಳ ಕರಕ್ಕಿ ಬಂಡಿ ಉತ್ಸವ ಮಧ್ಯಾಹ್ನ ಜರುಗಿತು. ವಿವಿಧ ಬಗೆಯ ಎತ್ತುಗಳನ್ನು ಬಂಡಿಗೆ ಕಟ್ಟಿ ಓಡಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೆರವಣಿಗೆ ನಡೆಯಿತು. ಎತ್ತುಗಳ ರಭಸವಾದ ಓಟ ಕಂಡು ಯುವಕರು ಕುಣಿದು ಕುಪ್ಪಳಿಸಿದರು.
ಸಂಜೆ ಅಲಂಕರಿತ ಎತ್ತುಗಳ ಆಕರ್ಷಕ ಮೆರವಣಿಗೆ ನಡೆಯಿತು. ಬಳಿಕ ಕರಕ್ಕಿಬಟ್ಟು ಎಂದು ಕರೆಯಲ್ಪಡುವ ಕೊನೆಯ ಎರಡು ಬಂಡಿಗಳ ಓಟ ಆಕರ್ಷಣೀಯವಾಗಿತ್ತು. ಬಂಡಿಯನ್ನು ಎಳೆದುಕೊಂಡು ಎತ್ತುಗಳು ಓಡುತ್ತಿದ್ದರೆ ಇನ್ನೊಂದಡೆ ಯುವಕರು ಕೇಕೆ ಶಿಳ್ಳೆ ಹಾಕುತ್ತ ಬಂಡಿಯ ವೇಗ ಹೆಚ್ಚಿಸಲು ಎತ್ತುಗಳನ್ನು ಹುರುದುಂಬಿಸುತ್ತಿದ್ದ ದೃಶ್ಯ ನೋಡುಗರ ಕಣ್ಮನ ಸೆಳೆಯಿತು.
ರಾತ್ರಿವರೆಗೂ ಬ್ರಹ್ಮದೇವರಿಗೆ ಭಕ್ತರು ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಕೊನೆಯಲ್ಲಿ ವೀರಗಾರರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ರಹ್ಮದೇವರಿಗೆ ಹೂರಣ, ತುಪ್ಪ ಉಣ್ಣಿಸುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.