ಇರಬೇಕು ಇರುವಂತೆ ಮರೆತು ಸಾವಿರ ಚಿಂತೆ; ಗಮನ ಸೆಳೆದ ಮಾನಸಿಕ ಸಮತೋಲನ ಸಂದೇಶ ಸಾರುವ ಬೀದಿ ನಾಟಕ

26 HVR 3 A
Published on

ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ಬುಧವಾರ ಅಸೋಶಿಯೇಷನ್ ಆಪ್ ಪಿಪಲ್ ವಿತ್ ಡಿಸ್ಯಾಬೆಲಿಟಿ ಮತ್ತು ಜಿಲ್ಲಾ ಕಲಾಬಳಗದ ಸಹಯೋಗದಲ್ಲಿ ‘ಇರಬೇಕು ಇರುವಂತೆ ಮರೆತು ಸಾವಿರ ಚಿಂತೆ’ ಎಂಬ ಬೀದಿ ನಾಟಕ ಪ್ರದರ್ಶನಗೊಂಡಿತು.
ಅವಸರದ ಈ ದಿನಗಳಲ್ಲಿ ಮಾನಸಿಕ ಸಮತೋಲನ ಮುಖ್ಯವೆಂಬ ಸಂದೇಶವನ್ನು ಈ ನಾಟಕದ ಮೂಲಕ ಕಲಾವಿದರು ಸಾರಿದರು. ಸದಾ ಹಸನ್ಮುಖಿಯಾಗಿ ಲವಲವಿಕೆಯಿಂದ ಕುಣಿದಾಡುತ್ತಿದ್ದ, ನಾಟಕದ ಮುಖ್ಯ ಪಾತ್ರಧಾರಿ ಶಂಕರಣ್ಣ ಒಮ್ಮೆಲೇ ಮೌನಿಯಾಗಿಬಿಡುತ್ತಾನೆ. ಇಂತಹ ಪ್ರಸಂಗದಲ್ಲಿ ಮನಃಶಾಸ್ತ್ರಜ್ಞೆ ನವ್ಯಶ್ರೀ, ಶಂಕರಣ್ಣನ ಮನೋಗೊಂದಲಗಳಲ್ಲಿ ಅವನೊಂದಿಗೆ ಚರ್ಚಿಸಿ ಪರಿಹಾರ ಕೊಡುತ್ತಾಳೆ. ವಾಸ್ತು, ಆರ್ಥಿಕ ಬಿಕ್ಕಟ್ಟು, ಅಗತ್ಯಕ್ಕಿಂತ ಹೆಚ್ಚು ಆಕಾಂಕ್ಷಿಯಾಗಿದ್ದ ಶಂಕರಣ್ಣ ಮತ್ತೆ ಮನುಷ್ಯನಾಗುತ್ತಾನೆ.
ಇದಕ್ಕೆ ಪೂರಕವಾಗಿ ಎಂ.ಎಲ್.ಎ ಟಿಕಿಟ್‌ಗಾಗಿ ಹಣ ಕಳೆದುಕೊಂಡ ರಾಜಕಾರಣಿ, ತನ್ನ ಮಗಳಿಗೆ ಶೇ.98 ಪ್ರತಿಶತ ಅಂಕ ಬಂದು ಇನ್ನೂ ಎರಡು ಪ್ರತಿಶತ ಬರಬೇಕಿತ್ತು ಎಂದು ಹತಾಶೆಯಾದ ಪಾಲಕ, ಮೋಬೈಲ್ ಗೀಳಿನಿಂದ ಹೊರಬರಲಾರದ ವಿದ್ಯಾರ್ಥಿನಿ, ಇವೆಲ್ಲ ಘಟನೆಗಳು ನಾಟಕದಲ್ಲಿ ಬರುತ್ತವೆ. ಗೋಬಿ ಡಾಕ್ಟರ್ ಎಂಬ ಹಾಸ್ಯ ಪಾತ್ರ ಎಲ್ಲರ ಗಮನ ಸೆಳೆಯಿತು.
ಶಾಲೆಯ 300ಕ್ಕೂ ಅಧಿಕ ವಿದ್ಯಾರ್ಥಿಗಳು ನಾಟಕ ವೀಕ್ಷಿಸಿದರು. ಮನಃಶಾಸ್ತ್ರಜ್ಞ ಪ್ರಭಾಕರ ಬಾರಕೇರ, ಸಾಹಿತಿ ಸತೀಶ ಕುಲಕರ್ಣಿ, ಕಲಾವಿದರಾದ ಕೆ.ಆರ್.ಹಿರೇಮಠ, ಶಶಿಕಲಾ ಅಕ್ಕಿ, ಮುತ್ತುರಾಜ ಹಿರೇಮಠ, ರಾಜು ಚೌಶೆಟ್ಟಿ, ಶಂಕರ ತುಮ್ಮಣ್ಣನವರ, ಆರ್.ಸಿ.ನಂದಿಹಳ್ಳಿ, ಶಂಕರ ಬಡಿಗೇರ, ಈರಣ್ಣ ಬೆಳವಡಿ, ಗೂಳಪ್ಪ ಅರಳಿಕಟ್ಟಿ, ಸುಧಾ, ಚಂದ್ರಪ್ಪ, ಷಣ್ಮುಖ, ಹಾಗೂ ನವ್ಯಶ್ರೀ ನಾಟಕದಲ್ಲಿ ನಟಿಸಿದರು. ಗೀತಾ ಕುಂದಾಪುರ, ಪ್ರವೀಣ ದಿವಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net