ಜಿಲ್ಲೆಯಲ್ಲಿ ಗರಿಬಿಚ್ಚಿದ ‘ಅಕ್ರಮ ಮಣ್ಣು ಗಣಿಗಾರಿಕೆ’; ಕೃಷಿ ಭೂಮಿ ಮೇಲೆ ಕಳ್ಳರ ಕಣ್ಣು; ರಾಮಾಪೂರ, ಕರ್ಜಗಿ ಭಾಗದಲ್ಲಿ ದಂಧೆ ಜೋರು

4 HVR 2 A
Published on

ಕೇಶವಮೂರ್ತಿ ವಿ.ಬಿ. ಹಾವೇರಿ

ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದೀಗ ಈ ದಂಧೆಯ ಸಾಲಿಗೆ ಅಕ್ರಮ ಮಣ್ಣು ಗಣಿಗಾರಿಕೆಯೂ ಸೇರುತ್ತಿದೆ. ಕೃಷಿ ಭೂಮಿಯ ಮೇಲೂ ಭೂಗಳ್ಳರ ಕಣ್ಣು ಬಿದ್ದಿದ್ದು, ಹಲವೆಡೆ ಅಕ್ರಮ ದಂಧೆ ಗರಿಬಿಚ್ಚಿದೆ. ಜಿಲ್ಲಾ ಕೇಂದ್ರ ಹಾವೇರಿ ಸುತ್ತಮುತ್ತ, ರಾಣೆಬೆನ್ನೂರ, ಹಿರೇಕೆರೂರ, ರಟ್ಟಿಹಳ್ಳಿ, ಹಾನಗಲ್ಲ, ಬ್ಯಾಡಗಿ, ಶಿಗ್ಗಾಂವಿ, ಸವಣೂರ ತಾಲೂಕಿನ ಕೆಲವೆಡೆ ಮಣ್ಣು ಸಾಗಣೆ ದಂಧೆ ಜೋರಾಗಿ ನಡೆಯುತ್ತಿದೆ. ಹಾವೇರಿ ತಾಲೂಕಿನ ಕರ್ಜಗಿ, ರಾಮಾಪೂರ ಸುತ್ತಮುತ್ತ ಕೆಂಪು ಮಣ್ಣಿನ ಅಕ್ರಮ ಗಣಿಗಾರಿಕೆಗೆ ಯಾವುದೇ ಅಡೆತಡೆ ಇಲ್ಲದಂತಾಗಿದೆ. ಉಳುಮೆ ಮಾಡುವ ಕೃಷಿ ಭೂಮಿಯಿಂದಲೇ ಮಣ್ಣು ಲೂಟಿ ಮಾಡುತ್ತಿರುವ ದಂಧೆಕೋರರು, ರಾಜಾರೋಷವಾಗಿ ಹಾಡಹಗಲೇ ಲಾರಿ, ಟಿಪ್ಪರ್, ಟ್ರಾೃಕ್ಟರ್‌ಗಳ ಮೇಲೆ ಹೇರಿಕೊಂಡು ಮಾರಾಟ ಮಾಡುತ್ತಿದ್ದಾರೆ. ಒಂದು ಟಿಪ್ಪರ್ ಮಣ್ಣಿಗೆ 3 ಸಾವಿರ ರೂ.ನಿಂದ 5 ಸಾವಿರದವರೆಗೆ ಸುಲಿಯುತ್ತಿದ್ದಾರೆ. ಹೊಸ ಲೇಔಟ್ ನಿರ್ಮಾಣ, ರಸ್ತೆ, ಕಟ್ಟಡ, ಇತರ ಕಾಮಗಾರಿಗಳಿಗೆ ಈ ಮಣ್ಣು ಬಳಸುತ್ತಿದ್ದಾರೆ. ಕೆಂಪು ಮಣ್ಣು ಗಣಿಗಾರಿಕೆಯಿಂದ ಭೌಗೋಳಿಕ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಸಂಪದ್ಬರಿತವಾದ ಕೃಷಿ ಭೂಮಿಯ ಡಲಿಗೆ ಜೆಸಿಬಿ ಇಳಿಸಿ ಮಣ್ಣು ಸಾಗಣೆ ಮಾಡಲಾಗುತ್ತಿದೆ. ಕೃಷಿ ಭೂಮಿಯಲ್ಲಿ ಯಾವುದೇ ಕಾರಣಕ್ಕೂ ಮಣ್ಣು ತೆಗೆಯುವಂತಿಲ್ಲ. ಕೃಷಿಗೆ ಯೋಗ್ಯವಲ್ಲದ ಪಾಳು ಜಮೀನು ಇದ್ದರೆ ಮಾತ್ರ ಅಲ್ಲಿನ ಮಣ್ಣು ಮಾರಾಟ ಮಾಡಬಹುದಾಗಿದೆ. ದಂಧೆಕೋರರ ಅಟ್ಟಹಾಸದಿಂದಾಗಿ ಜಿಲ್ಲೆಯಲ್ಲಿ ಕೃಷಿ ಭೂಮಿ ದಿನದಿಂದ ದಿನಕ್ಕೆ ಕಡಿಮೆಯಾಗುವ ಆತಂಕವಿದೆ. ಒಂದು ಬಾರಿ ಕೃಷಿ ಜಮೀನಿನ ಮಣ್ಣು ತೆಗೆದರೆ ಅಲ್ಲಿ ಮತ್ತೆ ನೈಸರ್ಗಿಕವಾಗಿ ಕೃಷಿ ಮಾಡಲು ಸಾಧ್ಯವಿಲ್ಲ. ರೈತರಿಗೆ ಹಣದ ಆಮಿಷ ಒಡ್ಡಿ, ಅನ್ನ ಕೊಡುವ ಭೂಮಿಗೆ ಕನ್ನ ಹಾಕುತ್ತಿದ್ದಾರೆ. ಮಣ್ಣು ದಂಧೆ ನಡೆಯುವ ಪ್ರದೇಶದ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕಿದೆ.

ಡಿಸಿ ಕಚೇರಿ ಎದುರು ಓಡಾಟ

ರಾಮಾಪುರ ಹಾಗೂ ಕರ್ಜಗಿ ಭಾಗದಿಂದ ಮಣ್ಣು ಹೇರಿಕೊಂಡು ಬರುವ ಟಿಪ್ಪರ್‌ಗಳು ದೇವಗಿರಿಯ ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯ ಮಾರ್ಗವಾಗಿ ಹಾವೇರಿ ಸುತ್ತಮುತ್ತ ತೆರಳುತ್ತವೆ. ಪೊಲೀಸರ ಕಣ್ಣೆದುರಲ್ಲೇ ರಾಜಾರೋಷವಾಗಿ ಓಡಾಡುತ್ತವೆ. ಕೆಂಪು ಮಣ್ಣು ಗಣಿಗಾರಿಕೆಗೆ ಕಾಣದ ಕೈಗಳು ಕೈಜೋಡಿಸಿವೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದ ಕಾರಣ ಈ ದಂಧೆಕೋರರು ಕೋಟ್ಯಂತರ ರೂ. ಕೊಳ್ಳೆ ಹೊಡೆಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ, ರೈತರಿಗೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ.

ಗಣಿ ಇಲಾಖೆ ಕ್ರಮ ತೆಗೆದುಕೊಳ್ಳಲಿ 

ಕೆಂಪು ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆದಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕೆಲವೆಡೆ ದಾಳಿ ಮಾಡಿ ನಂತರ ಸುಮ್ಮನಾಗುತ್ತಿದ್ದಾರೆ. ದಂಧೆಕೋರರ ಮಟ್ಟ ಹಾಕಲು ಕಠಿಣ ನಿರ್ಧಾರ ಕೈಗೊಳ್ಳುತ್ತಿಲ್ಲವೆಂಬ ಆರೋಪಗಳಿವೆ.

ಕೋಟ್:

ಕೃಷಿ ಜಮೀನಿನಲ್ಲಿ ಯಾವುದೇ ಕಾರಣಕ್ಕೂ ಮಣ್ಣು ಗಣಿಗಾರಿಕೆ ಮಾಡುವಂತಿಲ್ಲ. ಕೃಷಿಗೆ ಯೋಗ್ಯವಲ್ಲದ ಜಮೀನಿನಲ್ಲಿ ಮಾತ್ರ ಇಲಾಖೆಯಿಂದ ಅನುಮತಿ ಪಡೆದ ನಂತರವಷ್ಟೇ ಮಣ್ಣು ಸಾಗಣೆ ಮಾಡಬಹುದು. ಎರಡು ದಿನಗಳ ಹಿಂದೆಯಷ್ಟೇ ಅಕ್ರಮ ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ಎರಡು ಲಾರಿಗಳನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಹೆಚ್ಚಿಸಲಾಗುವುದು.

- ನವೀನ, ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net