ವಿದ್ಯಾರ್ಥಿಗಳು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಿ; ಕಾರ್ಗಿಲ್ ವಿಜಯೋತ್ಸವದಲ್ಲಿ ಮಾಜಿ ಸೈನಿಕ ಚಂದ್ರಶೇಖರ ಶಿಸನಹಳ್ಳಿ ಕರೆ

26 HVR 3
Published on

ಹಾವೇರಿ: ದೇಶ ನಮಗೆ ಏನು ಕೊಟ್ಟಿದೆ ಎಂಬುದಕ್ಕಿಂತ ಮೊದಲು ದೇಶಕ್ಕಾಗಿ ನಾನು ಏನು ಮಾಡಿದ್ದೇನೆ ಎಂಬ ಭಾವನೆ ಹೊಂದಬೇಕು. ಎಲ್ಲ ವಿದ್ಯಾರ್ಥಿಗಳು ರಾಷ್ಟ್ರಾಭಿಮಾನ ಬೆಳೆಸಿಕೊಂಡು, ರಾಷ್ಟ್ರ ರಕ್ಷಣೆಗೆ ಪಣ ತೊಡಬೇಕು ಎಂದು ಮಾಜಿ ಸೈನಿಕ ಚಂದ್ರಶೇಖರ ಶಿಸನಹಳ್ಳಿ ಕರೆ ನೀಡಿದರು.

ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ ಮತ್ತು ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಸಹಯೋಗದಲ್ಲಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಸೈನಿಕರು ಅನುಭವಿಸಿದ ಕಠಿಣ ಪರಿಸ್ಥಿತಿಗಳನ್ನು ಹಂಚಿಕೊಂಡರು. ಆ ಸಂದರ್ಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಹೆಮ್ಮೆಯ ವಿಷಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಸವಿತಾ ಹಿರೇಮಠ ಮಾತನಾಡಿದರು.

ಜಿಲ್ಲಾ ಯುವ ಅಧಿಕಾರಿ ಭುಕ್ಯಾ ಸಂಜೀವ, ಓಂ ಯುವಕ ಸಂಘದ ಅಧ್ಯಕ್ಷ ಗಣೇಶ ರಾಯ್ಕರ, ಡಾ.ಉಮಾ ಬಳಿಗಾರ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ವನಿತಾ ಮಾಗನೂರ, ಕಾರ್ಯದರ್ಶಿ ಶೋಭಾ ತಾಂಡೂರ, ಇತರರಿದ್ದರು. ಶಿಫಾನಾ ಎಸ್.ಸೈಯದ್ ಸ್ವಾಗತಿಸಿದರು ಎಂ.ಎಂ.ಮಡಿವಾಳರ ವಂದಿಸಿದರು. ಬಸಮ್ಮ ತಾಯಮ್ಮನವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net