

ಹಾವೇರಿ: ಭಾರತ ಮತ್ತು ಪಾಕಿಸ್ತಾನದ ನಡುವೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಹಾವೇರಿಯ ನಾಗೇಂದ್ರನಮಟ್ಟಿ ನಿವಾಸಿ, ಮಾಜಿ ಯೋಧ ಮಹಮ್ಮದ್ ಜಹಾಂಗೀರ್ ಖವಾಸ್ ಅವರು ಯುದ್ಧಭೂಮಿಯಿಂದ ಬದುಕಿ ಬಂದದ್ದೇ ದೊಡ್ಡ ಸಾಹಸಗಾಥೆಯಾಗಿದೆ. ಅವರ ಕಾರ್ಗಿಲ್ ಯುದ್ಧದ ಅನುಭವವನ್ನು ‘ವಿಜಯವಾಣಿ’ ಮುಂದೆ ಬಿಚ್ಚಿಟ್ಟಿದ್ದಾರೆ. ನಾನು 19 ವರ್ಷದವನಿದ್ದಾಗ ಭಾರತೀಯ ಸೈನ್ಯಕ್ಕೆ ಆಯ್ಕೆಯಾದೆ. ಮೊದಲು ಹೈದರಾಬಾದ್ ನಂತರ ಸಿಕ್ಕಿಂನ ಚಿಲಿಗುಡಿಯಲ್ಲಿ ಸೇವೆ ಸಲ್ಲಿಸಿದೆ. ಬಳಿಕ ಡೆಹ್ರಾಡೂನ್, ಪಂಜಾಬ್, ಅಸ್ಸಾಂನಲ್ಲಿ ಕೆಲಸ ಮಾಡಿದೆ. ಅಸ್ಸಾಂನಲ್ಲಿ ಭಜರಂಗ ಆಪರೇಷನ್‌ನಲ್ಲಿ ಪಾಲ್ಗೊಂಡಿದ್ದೆ. ನಂತರ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದು ಎಂದಿಗೂ ಮರೆಯಲಾಗದ ಸಂದರ್ಭವಾಗಿದೆ.
ಪಾಕಿಸ್ತಾನಿ ಸೈನಿಕರು ನಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ನಮ್ಮ ಮೇಲೆಯೇ ದಾಳಿ ನಡೆಸಿದ್ದರು. ಬಂಕರ್‌ಗಳಿಗೂ ನುಗ್ಗಿ ದಾಳಿ ನಡೆಸಿದ್ದರು. ಇದನ್ನೆಲ್ಲ ಹಿಮ್ಮೆಟ್ಟಿಸಿ ನಮ್ಮ ತಂಡ ಕಾರ್ಗಿಲ್‌ನಲ್ಲಿ ವಿಜಯ ಸಾಧಿಸಿತು. ಆದರೆ, ಯುದ್ಧದಲ್ಲಿ ನಮ್ಮ ಕಣ್ಣೆದುರೇ ನಮ್ಮ 500ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡ ದುಃಖ ಇನ್ನೂ ಹಾಗೆಯೇ ಇದೆ. ನಾನು ಕೂಡ ಬದುಕಿ ಬಂದದ್ದು ಪವಾಡವೇ ಸರಿ ಎಂದು ಖವಾಸ್ ಅವರು ಯುದ್ದದ ದಿನಗಳನ್ನು ನೆನೆದರು.
ಕೋಟ್:
ಕಾರ್ಗಿಲ್ ಯುದ್ಧದ ಕ್ಷಣ ಕ್ಷಣಕ್ಕೂ ಭಯಾನಕ ಮತ್ತು ರೋಚಕತೆಯಿಂದ ಕೂಡಿತ್ತು. ದೇಶದ ವಿಜಯದ ಸಂಕೇತವಾದ ಕಾರ್ಗಿಲ್ ಯುದ್ಧದಲ್ಲಿ ನಾನೂ ಕೂಡ ಭಾಗವಹಿಸಿದ್ದೆ ಎಂಬುದು ನನಗೆ ಹೆಮ್ಮೆಯ ವಿಷಯ.
- ಮಹಮ್ಮದ್ ಜಹಾಂಗೀರ್ ಖವಾಸ್, ಮಾಜಿ ಯೋಧ