ಜಿಲ್ಲೆಯ ಅಭಿವೃದ್ಧಿ ಕುರಿತು ಸರ್ಕಾರಗಳು ಗಮನ ಹರಿಸಲಿ; ಕರವೇ ಸ್ವಾಭಿಮಾನಿ ಸೇನೆ ಆಗ್ರಹ

Published on

ಹಾವೇರಿ: ಜಿಲ್ಲೆಯಾಗಿ 26 ವರ್ಷಗಳಾದರೂ ಬಗೆಹರೆಯದ ಜ್ವಲಂತ ಸಮಸ್ಯೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಯವರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಲಾಯಿತು.
ಸೇನೆಯ ಅಧ್ಯಕ್ಷ ನಿಂಗರಾಜಗೌಡ್ರ ಮಾತನಾಡಿ, ಕೃಷಿ ಆಧಾರಿತ ಜಿಲ್ಲೆಯಾಗಿರುವ ಹಾವೇರಿ ಜಿಲ್ಲೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಿಲ್ಲೆಯನ್ನು ನಿರ್ಲಕ್ಷಿಸುತ್ತಾ ಬಂದಿದ್ದು, ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಜಿಲ್ಲೆ ಹಿಂದುಳಿಯಲು ಕಾರಣವಾಗಿದೆ ಎಂದು ಆರೋಲಿಸಿದರು.
ಸೇನೆಯ ಜಿಲ್ಲಾಧ್ಯಕ್ಷ ರಾಮು ತಳವಾರ ಮಾತನಾಡಿ, ಜಿಲ್ಲೆಯಲ್ಲಿ ಹತ್ತಿ, ಮೆಕ್ಕೆಜೋಳ, ಸೋಯಾಬಿನ್, ಶೇಂಗಾ, ಭತ್ತ, ಅಡಕೆ, ತೆಂಗು, ಕಬ್ಬು, ಮಾವು, ಬಾಳೆ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಪೂರಕ ಕಾರ್ಖಾನೆಗಳನ್ನು ನಿರ್ಮಾಣ ಮಾಡುವ ಅಗತ್ಯವಿದೆ. ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಹಲವು ವಿಶ್ವವಿದ್ಯಾಲಯಗಳು ಇಲ್ಲಿ ಸ್ಥಾಪನೆಯಾಗಬೇಕು. ಅಲ್ಲದೇ ಜಿಲ್ಲಾಸ್ಪತ್ರೆಯು ಸಾರ್ವಜನಿಕರಿಂದ ಪ್ರತಿನಿತ್ಯ ತುಂಬಿ ತುಳುಕುತ್ತಿದ್ದು ಪ್ರತ್ಯೇಕವಾಗಿ ಜಾಗೆಯನ್ನು ಗುರುತಿಸಿ ಬೃಹತ್ ಜಿಲ್ಲಾಸ್ಪತ್ರೆ ನಿರ್ಮಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸೇನೆಯ ಉಪಾಧ್ಯಕ್ಷ ಸಂತೋಷಗೌಡ, ಕಾರ್ಯಾಧ್ಯಕ್ಷೆ ಸುವರ್ಣಮ್ಮ, ಜಿಲ್ಲಾ ಗೌರವಾಧ್ಯಕ್ಷ ಎಂ.ಕೆ.ತಿಮ್ಮಾಪುರ, ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷೆ ಸುಮಾ ಪುರದ, ಪ್ರೇಮಾ ಮುದಿಗೌಡ್ರ, ಜಿಲ್ಲಾ ವಕ್ತಾರ ಶಿವಪ್ಪ ಬೆಳಲಕೊಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವಣ್ಣೆಯ್ಯ ಬಸಾಪುರಮಠ, ಕರಿಬಸಪ್ಪ ಗೂಳಣ್ಣನವರ, ವಿನಯ ಭೂಶೆಟ್ಟಿ, ನಾಗರಾಜ ಯರಬಾಳ, ಬಸವರಾಜ ವರ್ದಿ, ಸುರೇಶ ವನಹಳ್ಳಿ, ಗೌರಮ್ಮ ಕುಲಕರ್ಣಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net