ಮಾದಕ ವಸ್ತು ಕೈಬಿಡಿ, ಜೀವನ ಕಟ್ಟಿಕೊಳ್ಳಿ; ಯುವ ಜನರಿಗೆ ನ್ಯಾಯಾಧೀಶರಾದ ಶೈಲಜಾ ಎಚ್.ವಿ. ಸಲಹೆ

19 HVR 5
Published on

ಹಾವೇರಿ: ಇತ್ತೀಚಿನ ದಿನಗಳಲ್ಲಿ ಯುವ ಜನತೆ ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯುವ ಜನತೆ ಮಾದಕ ವಸ್ತುಗಳಿಗೆ ದಾಸರಾಗದೇ ತಮ್ಮ ಅಮೂಲ್ಯ ಜೀವನ ಕಾಪಾಡಿಕೊಳ್ಳಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶೈಲಜಾ ಎಚ್.ವಿ. ಸಲಹೆ ನೀಡಿದರು.

ತಾಲೂಕಿನ ಕಳ್ಳಿಹಾಳ ಎಸ್‌ಸಿ, ಎಸ್‌ಟಿ ಸರ್ಕಾರಿ ಪ್ರಥಮ ದರ್ಜೆ ವಸತಿಯುತ ಕಾಲೇಜ್‌ನಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಮಾದಕ ವಸ್ತುಗಳ ತಡೆ ಹಾಗೂ ಅದರಿಂದಾಗುವ ದುಷ್ಪರಿಣಾಮಗಳ ಕುರಿತು, ಆತ್ಮಹತ್ಯೆ ತಡೆ, ಪೋಕ್ಸೋ ತಡೆ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಜನತೆ ಓದಿನ ಜತೆಗೆ, ಕ್ರೀಡೆ ಹಾಗೂ ಇತರೆ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಆತ್ಮಹತ್ಯೆ ಹಾಗೂ ಪೋಕ್ಸೋ ಪ್ರಕರಣಗಳ ತಡೆಗೆ ಹೆಚ್ಚಿನ ಅರಿವು ಮೂಡಿಸುವುದು ಅಗತ್ಯವಾಗಿದೆ. ಪೋಕ್ಸೋ ಕಾಯ್ದೆ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಹಾಗೂ ಈ ಪ್ರಕರಣದ ತಡೆಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಪ್ರಸ್ತುತ ನಡೆಯುತ್ತಿರುವ 90 ದಿನಗಳ ಮಧ್ಯಸ್ಥಿಕೆ ಅಭಿಯಾನವನ್ನು ಅಕ್ಟೋಬರ್ 7ರವರೆಗೂ ಹಮ್ಮಿಕೊಳ್ಳಲಾಗಿದೆ. ಖಾಯಂ ಜನತಾ ನ್ಯಾಯಾಲಯದಲ್ಲಿಯೂ ಸಹ ಯಾವುದೇ ಖರ್ಚು ಇಲ್ಲದೇ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು. ಘರ್ ಘರ್ ಮೇ ನ್ಯಾಯ ಕೀ ಜಾಗೃತಿ ಎಂಬ ಘೋಷ ವಾಕ್ಯದೊಂದಿಗೆ ಜನ ಸಾಮಾನ್ಯರಿಗೆ ಉಚಿತ ಕಾನೂನು ಅರಿತು ಮತ್ತು ನೆರವು ನೀಡಲಾಗುತ್ತಿದೆ. ಜಿಲ್ಲಾ ಜನಜಾಗೃತಿ ಸಮಿತಿಯನ್ನೂ ರಚಿಸಲಾಗಿದೆ. ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು. ಸಮಸ್ಯೆಗಳಲ್ಲಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಉಚಿತ ಸಹಾಯವಾಣಿ 15100 ಸಂಪರ್ಕಿಸಬಹುದು ಎಂದರು.

ಉಪ ಕಾನೂನು ನೆರವು ಅಭಿರಕ್ಷಣಾ ವಕೀಲ ಎಂ.ಸಿ.ಭರಮಣ್ಣನವರ ಮಾದಕ ವಸ್ತು ತಡೆ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಹಾಗೂ ಮನೋವೈದ್ಯೆ ಡಾ.ಶೃತಿ ಆತ್ಮಹತ್ಯೆ ತಡೆ ಕುರಿತು ಉಪನ್ಯಾಸ ನೀಡಿದರು.

ಕಾಲೇಜ್ ಪ್ರಾಂಶುಪಾಲ ಪ್ರೊ.ಡಿ.ಟಿ.ಪಾಟೀಲ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net