ಕನ್ನಡ ಜ್ಯೋತಿ ರಥಯಾತ್ರೆ 26ರಂದು ಜಿಲ್ಲೆಗೆ; ಸ್ವಾಗತಕ್ಕೆ ಸಜ್ಜಾಗಲು ಎಡಿಸಿ ವೀರಮಲ್ಲಪ್ಪ ಸೂಚನೆ

20 HVR 6
Published on

ಹಾವೇರಿ: ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 20, 21, ಹಾಗೂ 22ರಂದು ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥಯಾತ್ರೆ ಜಿಲ್ಲೆಯಲ್ಲಿ ಸೆ.26 ಹಾಗೂ 27ರಂದು ಸಂಚರಿಸಲಿದೆ. ರಥಯಾತ್ರೆಯನ್ನು ವಿಜೃಂಭಣೆಯಿಂದ ಸ್ವಾಗತಿಸಲು ಸಜ್ಜಾಗಿ ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಜ್ಯೋತಿ ರಥಯಾತ್ರೆ ಸ್ವಾಗತ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಥಯಾತ್ರೆ ಸೆ.26ರಂದು ಹಾನಗಲ್ಲ ತಾಲೂಕು ಮೂಲಕ ಜಿಲ್ಲೆಗೆ ಆಗಮಿಸಲಿದೆ. ನಂತರ ಹಿರೇಕೆರೂರ, ರಟ್ಟಿಹಳ್ಳಿ, ರಾಣೆಬೆನ್ನೂರ, ಬ್ಯಾಡಗಿ, ಹಾವೇರಿ, ಶಿಗ್ಗಾಂವಿ ಹಾಗೂ ಸವಣೂರ ಮಾರ್ಗವಾಗಿ ಸಂಚರಿಸಲಿದೆ. ಅಧಿಕಾರಿಗಳು, ಕನ್ನಡಪರ ಸಂಘನೆಗಳು, ವಿವಿಧ ಸಂಘ-ಸಂಸ್ಥೆಗಳು ಉತ್ಸಾಹದಿಂದ ಭಾಗವಹಿಸುವ ಮೂಲಕ ಯಶಸ್ವಿ ರಥಯಾತ್ರೆಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಹಾವೇರಿಗೆ ಆಗಮಿಸುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ತೋಟದಯಲ್ಲಾಪುರ ಬಳಿ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ನಗರದ ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗವಾಗಿ ವಾಲ್ಮೀಕಿ ವೃತ್ತದವರೆಗೆ ಮೆರವಣಿಗೆ ನಡೆಯಲಿದ್ದು, ಐದರಿಂದ ಆರು ಸಾವಿರ ಜನರು ಭಾಗವಹಿಸುವಂತೆ ನೋಡಿಕೊಳ್ಳಬೇಕು. ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ನಡೆಸಬೇಕು ಎಂದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿಗಳಾದ ಎಚ್.ಬಿ.ಚನ್ನಪ್ಪ, ಮಹ್ಮದ ಖಿಜರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಆರ್.ವಿ.ಚಿನ್ನಿಕಟ್ಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ಕಸಾಪ ವಿವಿಧ ತಾಲೂಕಾ ಅಧ್ಯಕ್ಷರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net