ಕನವಳ್ಳಿಯಲ್ಲಿ 17ನೇ ಶತಮಾನದ ಶಾಸನ ಪತ್ತೆ

Kanavalli Shasana B
Published on

ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದ ಸುರೇಶ ನಾಗಪ್ಪ ಕತ್ತೆಬೆನ್ನೂರು ಅವರ ಜಮೀನಿನಲ್ಲಿ 17ನೇ ಶತಮಾನದ ಅಪರೂಪದ ಶಾಸನ ಪತ್ತೆಯಾಗಿದೆ. ಶಾಸನವು 6 ಸಾಲುಗಳ ಪಾಠವನ್ನು ಹೊಂದಿದ್ದು, 2 ಅಡಿ ಎತ್ತರ ಹಾಗೂ 1 ಅಡಿ ಅಗಲವಿದೆ. ಶಾಸನದ ವಿಷಯ ತಿಳಿದ ಕೂಡಲೇ ನಗರದ ಕೆಎಲ್‌ಇ ಜಿಎಚ್ ಮಹಾವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಮತ್ತು ಸಂಶೋಧಕ ಡಾ.ಶರಣಪ್ಪ ಜಗ್ಗಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಹರಿಹರ ತಾಲೂಕು ಬನ್ನಿಕೋಡದ ಶಾಸನ ತಜ್ಞ ಡಾ.ರವಿಕುಮಾರ ನವಲಗುಂದ ಅವರಿಂದ ಶಾಸನದ ಅರ್ಥವನ್ನು ತಿಳಿದುಕೊಂಡಿದ್ದಾರೆ. ಪತ್ತೆ ಕಾರ್ಯಕ್ಕೆ ಸುರೇಶ ಕತ್ತೆಬೆನ್ನೂರು, ಡಯಾನಾ ಕತ್ತೆಬೆನ್ನೂರು, ಯಲ್ಲಪ್ಪ ಬರಡಿ, ಡಾ.ಎಸ್.ಆರ್ ಕೋರಿಶೆಟ್ಟರ್, ಪ್ರೊ.ಶರಣಪ್ಪ ಕದರಮಂಡಲಗಿ, ಹಂಪಿ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ಡಿ.ವೀರೇಶ, ಇತರರು ಸಹಕರಿಸಿದ್ದಾರೆ.
ಕಮ್ಮಾರಿಕೆ ಮಹತ್ವ ದಾಖಲು
‘ಕನವಳ್ಳಿ ಗ್ರಾಮದ ಕಮ್ಮಾರ ನಿಂಗಜ್ಜನ ಪುತ್ರ ಮಲ್ಲಣ್ಣ ಬೆರಿಂಗೆಯನ್ನು (ಬೆರಿಂಗೆಯ ಅಂದರೆ ರಂಧ್ರಕೊರೆಯುವ ವಸ್ತು) ಮಾಡಿಕೊಟ್ಟಿದ್ದಕ್ಕಾಗಿ ಗ್ರಾಮದ ಈ ಹೊಲವನ್ನು ಮಲ್ಲಣ್ಣನ ಮಕ್ಕಳು ಮತ್ತು ಮೊಮ್ಮಕ್ಕಳು ವಂಶಪಾರಂಪರ್ಯವಾಗಿ ಸೂರ್ಯ- ಚಂದ್ರರು ಇರುವವರೆಗೂ ಅವರಿಗೆ ಸೇರಿದ್ದು’ ಎಂಬ ಮಾಹಿತಿಯನ್ನು ದಾಖಲಿಸುತ್ತದೆ. ಶಾಸನದ ಕೆಳ ಭಾಗದಲ್ಲಿ ಕಮ್ಮಾರಿಕೆಯ ವಸ್ತುಗಳನ್ನು ಕಾಣಬಹುದು. ಈ ಶಾಸನವು ಕನವಳ್ಳಿ ಗ್ರಾಮದ ಹೆಸರನ್ನು ಮತ್ತು ಅಂದು ಆ ಗ್ರಾಮದಲ್ಲಿ ಅಸ್ತಿತ್ವದಲ್ಲಿದ್ದ ಕಮ್ಮಾರಿಕೆಯ ಮಹತ್ವವನ್ನು ಕೂಡ ದಾಖಲಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net