ಜತೆಗಿದ್ದ ಮತ್ತೊಬ್ಬ ಬಾಲಕ ಬಚಾವ್; ನಿವೇದನ ಚರಂಡಿಗೆ ಬಿದ್ದ ಪ್ರಕರಣ; ಪ್ರತ್ಯಕ್ಷದರ್ಶಿಗಳ ಹೇಳಿಕೆ

18 HVR 4
Published on

ಹಾವೇರಿ: ನಿವೇದನ ಹಾಗೂ ಮೂರ್ನಾಲ್ಕು ಮಕ್ಕಳು ಆಟವಾಡುತ್ತಿದ್ದರು. ನಿವೇದನ ಮತ್ತೊಬ್ಬ ಬಾಲಕ ಗಿರಿಯಾಸ್ ಅಂಗಡಿ ಮುಂದೆ ಹೊರಟಿದ್ದರು. ಈ ವೇಳೆ ಅಲ್ಲಿ ಕಾಲುವೆ ತೆರೆದಿದ್ದನ್ನು ಗಮನಿಸಿದ ಬಾಲಕ ಪಕ್ಕಕ್ಕೆ ಹಾರಿ ಬಚಾವಾದ. ನಿವೇದನ ಕೂಡ ಪಕ್ಕದಲ್ಲಿ ಹಾರಲು ಯತ್ನಿಸಿದರೂ ಕಾಲು ಜಾರಿ ಚರಂಡಿಗೆ ಬಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಿರಿಯಾಸ್ ಮಳಿಗೆ ಎದುರು ಆಲದ ಮರ ಕಡಿಯುವ ಸಂದರ್ಭದಲ್ಲಿ ಕಾಲುವೆ ಮೇಲಿದ್ದ ಎರಡು ಕಲ್ಲುಗಳು ತುಂಡಾಗಿದ್ದವು. ಕಾರಣ ಆ ಸ್ಥಳದಲ್ಲಿ ಕಾಲುವೆ ಬಾಯಿ ತೆರೆದುಕೊಂಡಿತ್ತು. ಗುರುವಾರ ಬೆಳಗ್ಗೆ ಭಾರಿ ಮಳೆ ಆದ್ದರಿಂದ ರಸ್ತೆ, ಕಾಲುವೆ ಎಲ್ಲ ತುಂಬಿ ಹರಿಯುತ್ತಿತ್ತು. ಈ ವೇಳೆ ನಿವೇದನ ಹಾಗೂ ಕೆಲ ಹುಡುಗರು ಆಟವಾಡುತ್ತಿದ್ದರು.
ನಿವೇದನ ಮುಂದೆ ಹೊರಟಿದ್ದ ಬಾಲಕ ತೆರೆದ ಕಾಲುವೆ ಕಂಡು ಏಕಾಏಕಿ ಪಕ್ಕಕ್ಕೆ ಹಾರಿ ಪಾಸಾಗಿದ್ದಾನೆ. ನಿವೇದನ ಕೂಡ ಕಾಲುವೆ ಕಂಡು ಪಕ್ಕಕ್ಕೆ ಹಾರಲು ಮುಂದಾದಾಗ ಕಾಲು ಜಾರಿ ಚರಂಡಿಗೆ ಬಿದ್ದಿದ್ದಾನೆ. ತಲೆ ಕೆಳಗೆ ಮಾಡಿ ಬಿದ್ದಿದ್ದ ನಿವೇದನ ಕಾಲು ಕಾಣಿಸುತ್ತಿತ್ತು. ಇದನ್ನು ಕಂಡ ಕಾರ್ತಿಕ ಬ್ಯಾಡಗಿ ಹಾಗೂ ಅರುಣ ಕಿತ್ತೂರ ಕೂಡಲೇ ಓಡಿ ಹೋಗಿ ಆತನನ್ನು ಹಿಡಿಯಲು ಯತ್ನಿಸಿದರೂ ಸಿಗಲಿಲ್ಲ. ನೀರಿನ ರಭಸಕ್ಕೆ ಚರಂಡಿ ಒಳಗೆ ಒಮ್ಮೆಲೆ ತೇಲಿಕೊಂಡು ಹೋದ. ಕೂಡಲೇ ಪೊಲೀಸರು, ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದೆವು. ಎಲ್ಲ ಸೇರಿ ಏನೆಲ್ಲ ಪ್ರಯತ್ನ ಮಾಡಿದರೂ ಆತನನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂಬ ನೋವು ಎಲ್ಲರಲ್ಲಿ ಮೂಡಿದೆ ಎಂದು ಪ್ರತ್ಯಕ್ಷದರ್ಶಿ ಮಂಜುನಾಥ ದೇಸಳ್ಳಿ ‘ವಿಜಯವಾಣಿ’ಗೆ ಎದುರು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net