ಉದ್ಘಾಟನೆ ಬಿಡಿ ಹಾಸ್ಟೆಲ್ ಸೌಲಭ್ಯ ಕೊಡಿ; ಕಳ್ಳಿಹಾಳ ಕಾಲೇಜ್ ಸಮಾರಂಭಕ್ಕೆವಿದ್ಯಾರ್ಥಿಗಳಿಂದ ಅಡ್ಡಿ; ಎಸ್‌ಎಫ್‌ಐ ನೇತೃತ್ವದಲ್ಲಿ ಶಾಸಕ ರುದ್ರಪ್ಪ ಲಮಾಣಿಗೆ ವಿದ್ಯಾರ್ಥಿಗಳ ಆಗ್ರಹ

6 HVR 6 B
Published on

ಹಾವೇರಿ: ತಾಲೂಕಿನ ಕಳಿಹಾಳ್ಳ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿರುವ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಸತಿಯುತ ಪ್ರಥಮ ದರ್ಜೆ ಮಹಾವಿದ್ಯಾಲಯಕ್ಕೆ ಹಾಸ್ಟೆಲ್ ಸೌಲಭ್ಯ, ಸೇರಿ ಇತರ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಸೋಮವಾರ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಉದ್ಘಾಟಕರಾಗಿ ಆಗಮಿಸಿದ್ದ ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಉದ್ಘಾಟನೆ ಸಮಾರಂಭ ಬಿಡಿ ಮೊದಲು ಹಾಸ್ಟೆಲ್ ಸೌಲಭ್ಯ ಕೊಡಿ ಎಂದು ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ವಿದ್ಯಾರ್ಥಿ ಮುಖಂಡ ಅರುಣ ನಾಗವತ ಮಾತನಾಡಿ, ಕಳ್ಳಿಹಾಳ ಎಸ್‌ಸಿ, ಎಸ್‌ಟಿ ವಸತಿಯುತ ಡಿಗ್ರಿ ಕಾಲೇಜ್‌ನಲ್ಲಿ ವಸತಿ ಸೌಲಭ್ಯವೇ ಇಲ್ಲ. ಹೆಸರಿಗೆ ಮಾತ್ರ ವಸತಿಯುತ ಕಾಲೇಜ್ ಆಗಿದೆ. ಬೇರೆ ಬೇರೆ ಯೋಜನೆಗಳಿಗೆ ಅನಗತ್ಯವಾಗಿ ಕೋಟ್ಯಂತರ ರೂ. ವೆಚ್ಚ ಮಾಡುವ ಸರ್ಕಾರ ವಿದ್ಯಾರ್ಥಿಗಳ ಅಭಿವೃದ್ಧಿಗೆ ಕಿವಿಗೊಡುತ್ತಿಲ್ಲ ಎಂದರು.

ಈ ಕಾಲೇಜ್‌ನಲ್ಲಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಏನು ಸೌಲಭ್ಯ ಕೊಟ್ಟಿದ್ದೀರಿ ಎಂದು ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡುತ್ತೀರಿ? ಪ್ರತಿ ನಿತ್ಯವೂ ವಿದ್ಯಾರ್ಥಿಗಳು ಅನುಭವಿಸುವ ಕಷ್ಟಗಳಿಗೆ ಪರಿಹಾರ ಹುಡುಕುತ್ತೇವೆ ಎಂದು ಹೇಳುತ್ತಿರಾ? ಎಷ್ಟು ದಿನ ಅಂತಾ ವಿದ್ಯಾರ್ಥಿಗಳು ನರಕ ಅನುಭವಿಸಬೇಕು? ಸುಸಜ್ಜಿತ ರಸ್ತೆ, ಸಮರ್ಪಕ ಬಸ್ ಸೌಕರ್ಯ ಯಾವಾಗ ಕಲ್ಪಿಸುತ್ತೀರಿ ? ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ರಕ್ಷಣೆ ಯಾವಾಗ ಕೊಡುತ್ತೀರಿ ? ಎಂದು ಪ್ರಶ್ನಿಸಿದರು.

ಈ ಕೂಡಲೇ ಕಾಲೇಜ್ ಕ್ಯಾಂಪಸ್‌ನಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡಿ. ರಸ್ತೆ, ಸಾರಿಗೆ, ಕುಡಿಯುವ ನೀರು, ಭದ್ರತಾ ವ್ಯವಸ್ಥೆ, ಉಪನ್ಯಾಸಕರ ನೇಮಕ ಮಾಡಿ. ನಂತರ ಕಾಲೇಜ್‌ನಲ್ಲಿ ಉದ್ಘಾಟನೆ, ಸಮಾರಂಭಗಳನ್ನು ಮಾಡಿ. ಆಗ ನಿಮಗೆ ನಾವೆಲ್ಲರೂ ಸೇರಿ ನಿಮಗೆ ಅಭಿನಂದನೆ ಸಲ್ಲಿಸುತ್ತೇವೆ. ಇಲ್ಲವೇ ಸೌಲಭ್ಯ ಸಿಗುವವರೆಗೂ ದಿಕ್ಕಾರದ ಕೂಗು ಮೊಳಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಶಾಸಕ ರುದ್ರಪ್ಪ ಲಮಾಣಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಶಾಸಕರು, ‘ಶೀಘ್ರದಲ್ಲೇ ಹಾಸ್ಟೆಲ್, ಇತರ ಸೌಲಭ್ಯ ಒದಗಿಸಲಾಗುವುದು’ ಎಂದು ಸಮಾಧಾನಪಡಿಸಿ, ಕಾರ್ಯಕ್ರಮದಲ್ಲಿ ಹಾಜರಾದರು.

ಎಸ್‌ಎಫ್‌ಐ ಕಾಲೇಜ್ ಘಟಕದ ಪ್ರಮುಖರಾದ ಅಜೀಮ್ ಬೆಂತೂರ, ಹೊನ್ನಪ್ಪ ತಳವಾರ, ಗೌತಮ ಪೂಜಾರ, ಸುಚಿತ್ರಾ ಲಂಬಾಣಿ, ಲಕ್ಷ್ಮೀ ಮಾಳಗಿ, ಯಲ್ಲಮ್ಮ ಕುಮಾರಿ, ಮಧು ಕಳ್ಳಿಹಾಳ, ಮೇಘನಾ ಎಂ.ಪಿ., ರಾಜೇಶ್ವರಿ ಜಿ.ಎಚ್., ಇತರರಿದ್ದರು.

ನಮ್ಮ ಕೂಗು ಕೇಳಲಿಲ್ಲವೇ ?

ಕೃಷ್ಣ ನಾಯ್ಕ ಮಾತನಾಡಿ, ಯಾರ ಪ್ರತಿಷ್ಠೆಗೆ ತರಾತುರಿಯಲ್ಲಿ ನಗರದಲ್ಲಿದ್ದ ಕಾಲೇಜ್ಅನ್ನು ಗುಡ್ಡಗಾಡು ಪ್ರದೇಶಕ್ಕೆ ಸ್ಥಳಾಂತರಿಸಿದ್ದೀರಿ ? ನಮ್ಮ ಕಾಲೇಜ್‌ಗೆ ಕನಿಷ್ಠ ಮೂಲ ಸೌಲಭ್ಯಗಳನ್ನು ಒದಗಿಸಿ ಎಂದು ವಿದ್ಯಾರ್ಥಿಗಳು ಹಲವು ಬಾರಿ ಹೋರಾಟ ಮಾಡಿದರೂ ನಮ್ಮ ಕೂಗು ಯಾರಿಗೂ ಕೇಳಲಿಲ್ಲವೇ? ಉತ್ತರ ನೀಡಿ ಶಾಸಕರೇ ಉತ್ತರ ನೀಡಿ? ಕಾಲೇಜ್ ಮುಂದೆ ವಿದ್ಯಾರ್ಥಿಗಳು ಧರಣಿ, ಹೋರಾಟ ಮಾಡಿದಾಗ ನಿಮ್ಮ ಕಿವಿ ಕೇಳಲಿಲ್ಲವೇ ? ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಜಾನೆಯಿಂದ ಸಂಜೆಯ ತನಕ ಬಿಸಿಲು ಮಳೆ ಲೆಕ್ಕಿಸದೆ ನಡೆಸಿದ ಹೋರಾಟದ ಕೂಗು ಕೇಳಲಿಲ್ಲವೇ ? ಎಂದು ಆಕ್ರೋಶ ಹೊರಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net