

ಹಾವೇರಿ: ನಮ್ಮ ದೇಶದಲ್ಲಿ ಗುರು-ಶಿಷ್ಯ ಪರಂಪರೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಶಿಕ್ಷಕರಿಗೆ ಗೌರವ ಕೊಟ್ಟರೆ ನಮ್ಮ ಜೀವನ ಸುಂದರವಾಗಿರುತ್ತದೆ. ಇಂತಹ ಗುರುವಂದನೆಯಂಥ ಕಾರ್ಯಕ್ರಮಗಳ ಮೂಲಕ ಇಬ್ಬರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ಮೆಚ್ಚುವಂಥದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ವೈ.ಬಿ.ಆಲದಕಟ್ಟಿ ಹೇಳಿದರು.
ನಗರದ ಶ್ರೀ ಕಾಳಿದಾಸ ಪ್ರೌಢಶಾಲೆಯಲ್ಲಿ 1994-95ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ತಂಡದಿಂದ ಇತ್ತೀಚೆಗೆ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಷ್ಟ ಕಾಲದಲ್ಲಿ ಅನುದಾನರಹಿತವಾಗಿ ಆರಂಭಗೊಂಡ ಈ ಸಂಸ್ಥೆ ಇಂದು ಸ್ವತಂತ್ರ ಕಟ್ಟಡವನ್ನು ಹೊಂದಿ ಈ ಶಾಲೆಯಲ್ಲಿ ಈಗಾಗಲೇ 32 ತಂಡಗಳು ಹೊರಬಂದಿದ್ದು, ಅದರಲ್ಲಿ ಪ್ರಮುಖವಾಗಿ ಪ್ರಥಮ ತಂಡ ಗುರುವಂದನಾ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಎಸ್.ಎಫ್.ಎನ್ ಗಾಜಿಗೌಡ್ರ ಮಾತನಾಡಿ, ಇಂದಿನ ದಿನಗಳಲ್ಲಿ ಗುರು- ಶಿಷ್ಯರು ಹತ್ತಿರವಾಗುವ ಬದಲು ದೂರವಾಗುತ್ತಿದ್ದಾರೆ. ಗುರುವಿನ ಸ್ಥಾನವನ್ನು ಮೊಬೈಲ್ ಕಸಿದುಕೊಳ್ಳುತ್ತಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ, ಬ್ಯಾಡಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ ಕೋಟಿ, ಡಯಟ್ ಕಾಲೇಜಿನ ಉಪನ್ಯಾಸಕ ಎಸ್.ಎಸ್.ಅಡಿಗ, ಸಂಸ್ಥೆಯ ಕಾರ್ಯದರ್ಶಿ ಪ್ರಭುಗೌಡ ಗಾಜಿಗೌಡ್ರ, ಮುಖ್ಯ ಶಿಕ್ಷಕ ಎಂ.ಎಸ್.ಅಚನಗೌಡ್ರ ಮಾತನಾಡಿದರು.
ಶೋಭಾ ಗಾಜಿಗೌಡ್ರ, ಕಲಾವತಿ ಗಾಜಿಗೌಡ್ರ, ಹಳೆಯ ವಿದ್ಯಾರ್ಥಿಗಳಾದ ಅಲ್ಲಾಭಕ್ಷಿ ಮುಲ್ಲಾ, ಹನುಮಂತ ಧರೆಣ್ಣವರ, ವೆಂಕಟೇಶ ಇಟಗಿ, ಅಜ್ಜಪ್ಪ ಕಾಡಪ್ಪನವರ, ರಮೇಶ ತುಮರಿ, ಸಮೀರ್ ಮುಲ್ಲಾ, ಇತರರು ಉಪಸ್ಥಿತರಿದ್ದರು.
ಶೀಲಾ ಪಾಟೀಲ ಹಾಗೂ ಎಸ್.ಆರ್.ಎಸ್ ಕಲಾ ತಂಡದವರು ಕನ್ನಡದ ಜಾಗೃತ ಗೀತೆಗಳನ್ನು ಹಾಡಿದರು. ವರ್ಷಾ ವೆಂಕಟಾಪುರ ಮತ್ತು ಪ್ರತಿಭಾ ದೊಡ್ಡಗೌಡ್ರ ನಿರೂಪಿಸಿದರು. ಶಂಭು ಮಲ್ಲಿಗಾರ ಸ್ವಾಗತಿಸಿದರು. ಧರ್ಮಪ್ಪ ಮಳ್ಳಮ್ಮನವರ ವಂದಿಸಿದರು.