

ಹಾವೇರಿ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾಗಿನೆಲೆಯಲ್ಲಿ ಇತ್ತೀಚೆಗೆ ದಸರಾ ಹಬ್ಬ ಆಚರಿಸಲಾಯಿತು.
ಉತ್ಸವಕ್ಕೆ ಚಾಲನೆ ನೀಡಿದ ಅಪರ ಜಿಲ್ಲಾಧಿಕಾರಿ ಹಾಗೂ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ನಾಗರಾಜ ಎಲ್. ಮಾತನಾಡಿ, ಸಂತ ಶ್ರೇಷ್ಠ ಕನಕದಾಸರು ತಮ್ಮ ಜೀವಿತಕಾಲದಲ್ಲಿ ಕಾಗಿನೆಲೆ, ದಾಸನಕೊಪ್ಪ, ಕುಮ್ಮೂರು, ಇಂಗಳಗೊಂದಿಯಲ್ಲಿ ದೇವರನ್ನು ಪ್ರತಿಷ್ಠಾಪಿಸಿ ವಿಜಯ ದಶಮಿ ಆಚರಿಸುತ್ತ ಬಂದಿದ್ದರು. ಅವರ ಆಚರಣೆ ಹಾಗೂ ಸಂಪ್ರದಾಯವನ್ನು ಗ್ರಾಮಸ್ಥರು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ ಎಂದರು.
ದಸರಾ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಸವರಾಜ ಶಿಗ್ಗಾಂವಿ ಹಾಗೂ ತಂಡದವರು ಮತ್ತು ಉದಯಕುಮಾರ ಕಾರಬಾರಿಯವರ ಡೊಳ್ಳಿನ ಕುಣಿತ ತಂಡಗಳು ಭಾಗವಹಿಸಿದ್ದವು. ದಸರಾ ಹಬ್ಬದ ಕಾರ್ಯಕ್ರಮದಲ್ಲಿ ಕಾಗಿನೆಲೆಯ ಗ್ರಾಮಸ್ಥರು, ಪ್ರಾಧಿಕಾರದ ಸಿಬ್ಬಂದಿ, ಇತರರು ಭಾಗವಹಿಸಿದ್ದರು.