ಸಬಲೆಯಾಗಿ ಬದುಕಲು ಗೃಹಲಕ್ಷ್ಮೀ ನೆರವು; ಸಚಿವ ಶಿವಾನಂದ ಪಾಟೀಲ

30 HVR 3
Published on

ಹಾವೇರಿ: ಗೃಹಲಕ್ಷ್ಮೀ ಯೋಜನೆ ಅಬಲೆಯಾದ ಮಹಿಳೆ ಸಬಲೆಯಾಗಿ ಬದುಕಲು ಅವಕಾಶ ಕಲ್ಪಿಸುತ್ತದೆ. ಕುಟುಂಬದ ನಿರ್ವಹಣೆಗೆ ಪರಾವಲಂಬನೆ ತಪ್ಪಿಸಿ ಸ್ವಂತ ಬಲದಲ್ಲಿ ಬದುಕಲು ಅವಕಾಶ ಕಲ್ಪಿಸುತ್ತದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ, ಕೃಷಿ ಮಾರುಕಟ್ಟೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಹಾವೇರಿ ತಾಲೂಕಿನ ಕಬ್ಬೂರ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಿದ್ದ ‘ಗೃಹಲಕ್ಷ್ಮೀ’ ಯೋಜನೆಯ ಅನುಷ್ಠಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಐದು ಗ್ಯಾರಂಟಿ ಯೋಜನೆಗಳ ಮೂಲಕ ದೇಶದ ಯಾವ ರಾಜ್ಯದ ಮಹಿಳೆಯರಿಗೂ ದೊರೆಯದ ಭಾಗ್ಯ ನಮ್ಮ ರಾಜ್ಯದ ಮಹಿಳೆಯರಿಗೆ ದೊರೆತಿದೆ. ಸ್ವಾತಂತ್ರಾೃ ನಂತರದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾತ್ರ ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದರು.
ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸುವ ನಿಟ್ಟಿನಲ್ಲಿ ಕುಟುಂಬದ ಯಜಮಾನಿಗೆ ಕುಟುಂಬದ ನಿರ್ವಹಣೆಗೆ ಹಾಗೂ ಸ್ವಾವಲಂಬನೆಗಾಗಿ ತಿಂಗಳಿಗೆ 2 ಸಾವಿರ ರೂ. ಕೊಡುವ ಗೃಹಲಕ್ಷ್ಮೀ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಲಾಗಿದೆ. ಸರ್ಕಾರಕ್ಕೆ ಎಷ್ಟೇ ಆರ್ಥಿಕ ಹೊರೆಯಾದರೂ ಮಹಿಳೆಯರ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಮುಂದುವರೆಸಲಾಗುವುದು ಎಂದರು.
ರಾಜ್ಯದಲ್ಲಿ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೆ ಯೋಜನೆಯಾದ ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ 1.21 ಕೋಟಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ. ಜಿಲ್ಲೆಯಲ್ಲಿ 3.17 ಲಕ್ಷ ಕುಟುಂಬಗಳಿಗೆ ಅನ್ನಭಾಗ್ಯ ಸೌಲಭ್ಯ ಕಲ್ಪಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಜಿಲ್ಲೆಯಿಂದ ಅತೀ ಹೆಚ್ಚು ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಎಲ್ಲ ಗ್ಯಾರಂಟಿ ಯೋಜನೆಗಳು ಮಹಿಳೆಯರಿಗೆ ಬಲ ತುಂಬಲಿವೆ ಎಂದರು.
ಕಾರ್ಯಕ್ರಮದಲ್ಲಿ ಕಬ್ಬೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಬಸಪ್ಪ ಹೊಸಳ್ಳಿ, ಉಪಾಧ್ಯಕ್ಷೆ ಶೋಭಾ ಹರಿಜನ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಗುಣಾರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ಎಂ.ಎಂ.ಹಿರೇಮಠ, ಇತರರು ಉಪಸ್ಥಿತರಿದ್ದರು.
2.57 ಲಕ್ಷ ರೈತರಿಗೆ ವಿಮೆ ರಕ್ಷಣೆ
ಪ್ರಕೃತಿಯ ಮುನಿಸಿನಿಂದ ಇಂದು ರಾಜ್ಯದ ಎಲ್ಲ ಭಾಗದಲ್ಲಿ ಮಳೆ ಕ್ಷಿಣಿಸಿದೆ. ಇದಕ್ಕೆ ಜಿಲ್ಲೆಯ ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ. ಈಗಾಗಲೇ ಜಿಲ್ಲೆಯಲ್ಲಿ 2.57 ಲಕ್ಷ ರೈತರು ತಮ್ಮ ಬೆಳೆಗಳಿಗೆ ವಿಮಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಸಮಸ್ಯೆಗಳನ್ನು ಆದಷ್ಟು ಪರಿಹರಿಸಲಾಗುವುದು. ಹಾಗೆಯೇ ಜಿಲ್ಲೆಯಲ್ಲಿ ಮುಂದಿನ ಒಂದುವರೆ ವರ್ಷದ ಅವಧಿಯಲ್ಲಿ ಕುಡಿಯುವ ನೀರಿನ ಯೋಜನೆಗಳು ಹಾಗೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಪಾಟೀಲರು ಹೇಳಿದರು.
ಬರ ಘೋಷಣೆಗೆ ಮನವಿ
ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ಬಸವರಾಜ ಶಿವಣ್ಣ ಮನವಿ ಮಾಡಿಕೊಂಡರು.
ಪೂರ್ಣಕುಂಭದ ಸ್ವಾಗತ
ಗೃಹಲಕ್ಷ್ಮೀ ಫಲಾನುಭವಿಗಳು ಪೂರ್ಣಕುಂಭದೊಂದಿಗೆ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿ ತಿಥಿಗಳನ್ನು ಸ್ವಾಗತಿಸಿದರು. ಆವರಣ ರಂಗೋಲಿ, ತಳಿರು ತೋರಣದಿಂದ ಅಲಂಕರಿಸಲಾಗಿತ್ತು. ಮೈಸೂರಿನ ಕಾರ್ಯಕ್ರಮದ ನೇರ ಪ್ರಸಾರಕ್ಕಾಗಿ ಎಲ್‌ಇಡಿ ವಾಲ್ ಅಳವಡಿಸಲಾಗಿತ್ತು. ಕಾರ್ಯಕ್ರಮದ ನಂತರ ಗ್ರಾಮದಲ್ಲಿ ಅಮೃತ ಸರೋವರ ಯೋಜನೆಯಡಿ ಅಭಿವೃದ್ಧಿ ಪಡಿಸಲಾದ ಕಬ್ಬೂರ ಗ್ರಾಮದ ಕೆರೆಯನ್ನು ಸಚಿವರು ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net