ಅವಧಿ ಮೀರಿದ ಹಾಲಿನ ಪುಡಿ ವಿತರಣೆ !; ಕಬ್ಬೂರ ಅಂಗನವಾಡಿ ಸಿಬ್ಬಂದಿ ಅಚಾತುರ್ಯ

Milk Powder Expired
Published on

ಹಾವೇರಿ: ತಾಲೂಕಿನ ಕಬ್ಬೂರ ಗ್ರಾಮದ ಅಂಗನವಾಡಿಯಲ್ಲಿ ಅವಧಿ ಮೀರಿದ ಹಾಲಿನ ಪೌಡರ್ ಪಾಕೆಟ್‌ಗಳನ್ನು ಮಕ್ಕಳಿಗೆ ವಿತರಿಸಲಾಗಿದ್ದು, ಅಂಗನವಾಡಿ ಅಚಾತುರ್ಯಕ್ಕೆ ಗ್ರಾಮಸ್ಥರು ಕಿಡಿಕಾರಿದ್ದಾರೆ.

ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಬಳಿ ಇರುವ ಅಂಗನವಾಡಿಯಲ್ಲಿ ರಾಜ್ಯ ಸರ್ಕಾರದ ಕ್ಷೀರ ಭಾಗ್ಯ ಯೋಜನೆಯಡಿ ಬಾಣಂತಿಯರಿಗೆ ಹಾಗೂ ಗರ್ಭಿಣಿಯರಿಗೆ ಗುರುವಾರ ನಂದಿನಿ ಹಾಲಿನ ಪೌಡರ್ ಪಾಕೆಟ್‌ಗಳನ್ನು ವಿತರಿಸಲಾಗಿತ್ತು. ಕೆಲ ಮಹಿಳೆಯರು ಪಾಕೆಟ್‌ನ ಎಕ್ಸ್‌ಪೈರಿ ದಿನಾಂಕ ಗಮನಿಸಿದಾಗ ಅದು ಅವಧಿ ಮೀರಿದೆ ಎಂಬುದು ಗೊತ್ತಾಗಿದೆ. ವಿಷಯ ತಿಳಿದು ದಂಗಾಗಿರುವ ಗ್ರಾಮಸ್ಥರು ಇದನ್ನು ಸೇವಿಸಿ ಮಕ್ಕಳಿಗೆ, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಜತೆಗೆ ಅಂಗನವಾಡಿಯಲ್ಲಿ ಕೆಲ ಗರ್ಭಿಣಿಯರು ಹಾಗೂ ಬಾಣಂತಿಯರ ಹೆಸರಲ್ಲಿ ನಕಲಿ ಸಹಿ ಮಾಡಿ ಆಹಾರ ಸಾಮಗ್ರಿಗಳನ್ನು ಬೇರೆಯವರು ಪಡೆದಿದ್ದಾರೆ ಎಂದು ಗ್ರಾಮದ ಮಹಿಳೆಯೊಬ್ಬರು ದೂರಿದ್ದಾರೆ. ನಿರ್ಲಕ್ಷೃ ತೋರಿದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಿ, ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸರಬರಾಜು ಕುರಿತು ಪರಿಶೀಲಿಸಿ

ಕ್ಷೀರಭಾಗ್ಯ ಯೋಜನೆಯಡಿ ಹಾವೇರಿ ಹಾಲು ಒಕ್ಕೂಟ (ಹಾವೆಮುಲ್)ನಿಂದ ಅಂಗನವಾಡಿ ಮಕ್ಕಳು, ಗರ್ಭಿಣಿಯರಿಗೆ ವಿತರಿಸಲಾಗಿದೆ. ಕಬ್ಬೂರ ಗ್ರಾಮದಲ್ಲಿ ವಿತರಿಸಿರುವ ಹಾಲಿನ ಪಾಕೆಟ್ ಜನವರಿ 30, 2025ರಂದು ಪ್ಯಾಕಿಂಗ್ ಮಾಡಲಾಗಿದ್ದು, ಜೂನ್ 14, 2025ರಂದು ಎಕ್ಸ್‌ಪೈರ್ ಆಗಿದೆ. ಅವಧಿ ಮೀರಿದ ಹಾಲಿನ ಪೌಡರ್ ಅನ್ನು ಕಬ್ಬೂರ ಗ್ರಾಮದಲ್ಲಿ ಮಾತ್ರ ವಿತರಿಸಲಾಗಿದೆಯೇ ಅಥವಾ ಬೇರೆಡೆ ಎಲ್ಲೆಲ್ಲಿ ವಿತರಿಸಲಾಗಿದೆ ಎಂಬ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಕೋಟ್:

ಕಬ್ಬೂರ ಗ್ರಾಮದ ಅಂಗನವಾಡಿಯಲ್ಲಿ ಅವಧಿ ಮೀರಿದ ಹಾಲಿನ ಪುಡಿ ವಿತರಿಸಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತು ಮಾಡಲು ಕ್ರಮ ಜರುಗಿಸಲಾಗುವುದು. ಅವಧಿ ಮೀರಿದ ಹಾಲಿನ ಪುಡಿ ವಿತರಣೆಯ ಕುರಿತು ಪರಿಶೀಲಿಸಲಾಗುವುದು.

- ರುಚಿ ಬಿಂದಲ್, ಜಿಪಂ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net