ನ್ಯಾಯ ಸಮ್ಮತವಾಗಿ ಕಬ್ಬಿನ ದರ ನಿಗದಿಪಡಿಸಿ; ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಒತ್ತಾಯ

Kabbu
Published on

ಹಾವೇರಿ: ಶಿಗ್ಗಾಂವಿಯ ವಿ.ಐ.ಎನ್.ಪಿ. ಶುಗರ್ಸ್ ಫ್ಯಾಕ್ಟರಿ ಮಾಲೀಕರ ಜತೆ ಕೆಲ ರೈತ ಮುಖಂಡರು ಸಭೆ ನಡೆಸಿ, ಪ್ರತಿ ಟನ್ ಕಬ್ಬಿಗೆ ಕೇವಲ 3,010 ರೂ. ನಿಗದಿಪಡಿಸಿರುವುದು ಸರಿಯಲ್ಲ. ಜಿಲ್ಲಾಧಿಕಾರಿಯವರು ಹಾಗೂ ಸರ್ಕಾರ ಮಧ್ಯಪ್ರವೇಶಿಸಿ ನ್ಯಾಯ ಸಮ್ಮತವಾಗಿ ಕಬ್ಬಿನ ಎಫ್‌ಆರ್‌ಪಿ ದರ ನಿಗದಿಪಡಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಟನ್ ಕಬ್ಬಿಗೆ 4,000 ರೂ. ನಿಗದಿ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ. ಈ ಬಗ್ಗೆ ಅರಿತುಕೊಳ್ಳದೇ ಕೆಲ ಮುಖಂಡರು ಸಭೆಯಲ್ಲಿ ಕಡಿಮೆ ದರಕ್ಕೆ ಒಪ್ಪಿರುವುದನ್ನು ಖಂಡಿಸುತ್ತೇವೆ ಎಂದರು.
ರಾಜ್ಯದಲ್ಲಿ ಶೇ.40ರಷ್ಟು ಕಬ್ಬು ಉತ್ಪಾದನೆ ಕಡಿಮೆಯಾಗಿದೆ. ಆದರೆ, ಸಕ್ಕರೆ ಕಾರ್ಖಾನೆಗಳಿಗೆ ಕಬ್ಬಿನ ಬೇಡಿಕೆ ಹೆಚ್ಚಾಗಿದೆ. ಕಬ್ಬಿನಿಂದ ಎಥೆನಾಲ್ ಉತ್ಪಾದಿಸುತ್ತಿರುವ ಕಾರಣ ಹೆಚ್ಚು ಲಾಭ ಗಳಿಸುತ್ತಿದ್ದಾರೆ. ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಹಾಗಾಗಿ, ಕಬ್ಬಿನ ದರ ಹೆಚ್ಚಿಸಬೇಕು. ಇಲ್ಲದಿದ್ದರೆ ಹೆಚ್ಚು ಬೆಲೆ ನೀಡುವ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮಂಗಳವಾರ ನಡೆದ ಸಭೆಯನ್ನು ಕಬ್ಬು ಬೆಳೆಗಾರರು ಒಪ್ಪಿಕೊಳ್ಳಬಾರದು. ಶೀಘ್ರದಲ್ಲೇ ಜಿಲ್ಲೆಯಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ಕರೆದು ಮುಂದಿನ ನಡೆ ಕುರಿತು ತೀರ್ಮಾನಿಸಲಾಗುವುದು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕರಡ್ಡಿ ಮರಚರಡ್ಡೇರ, ಶೇಕಣ್ಣ ಮಾಳಗಿ, ಬಸಪ್ಪ ದೇವಗಿರಿ, ಮಂಜುನಾಥ ಅಸುಂಡಿ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net