

ಹಾವೇರಿ: ಪಂಜಾಬ, ಹರಿಯಾಣ ರಾಜ್ಯಗಳ ರೈತರ ಮೇಲೆ ಪೊಲೀಸ್ ದೌರ್ಜನ್ಯ ನಿಲ್ಲಿಸಬೇಕು. ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಮಾತನಾಡಿ, ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ರೈತರ ಮೇಲೆ ಕೇಂದ್ರ ಸರ್ಕಾರ ಪೊಲೀಸರ ಮೂಲಕ ದೌರ್ಜನ್ಯ ಎಸಗುತ್ತಿದೆ. ಪೊಲೀಸರ ದಾಳಿಯಿಂದ ರೈತರು ಅಸುನೀಗುತ್ತಿದ್ದಾರೆ. ಇದು ಖಂಡನೀಯ. ಅಧಿಕಾರ ಬಲದಿಂದ ರೈತರ ಚಳುವಳಿ ನಾಶ ಮಾಡಲು ಸಾಧ್ಯವಿಲ್ಲ. ನಾವು ಸರ್ಕಾರದ ಬಿಕ್ಷೆ ಕೇಳುತ್ತಿಲ್ಲ ನ್ಯಾಯ ಕೇಳುತ್ತಿದ್ದೇವೆ. ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಇಡೀ ದೇಶದ ರೈತರು ನಿಮ್ಮ ಸಚಿವರಿಗೆ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾತರಿ ಶಾಸನ ಜಾರಿ ಆಗಲೇಬೇಕು. ದೇಶದ ರೈತರ ಸಂಪೂರ್ಣ ಸಾಲಮನ್ನಾ ಆಗಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ಬರಬೇಕು. ಭಾರತ ಸರ್ಕಾರ ಡಬ್ಲ್ಯೂಟಿಒ ಒಪ್ಪಂದದಿಂದ ಹೊರಬರಬೇಕು. ಫಸಲ್ ಭೀಮಾ ಬೆಳೆ ಯೋಜನೆ ಪದ್ದತಿ ಬದಲಾಗಿ ಪ್ರತಿ ರೈತನ ಹೊಲದ ಬೆಳೆ ವಿಮೆ ಜಾರಿಯಾಗಬೇಕು. ಒಂದೂವರೆ ವರ್ಷ ದೆಹಲಿ ಗಡಿಯಲ್ಲಿ ಹೋರಾಟ ಮಾಡಿ ಪ್ರಾಣ ಕಳೆದುಕೊಂಡ 750 ರೈತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಅಧ್ಯಕ್ಷ ರಾಜು ತರಲಘಟ್ಟ, ಶೇಖಣ್ಣ ಮಾಳಗಿ, ಬಸವಣ್ಣೆಪ್ಪ ದೇವಗಿರಿ, ಪಂಚಪ್ಪ ಹೆಗ್ಗಣನವರ, ಗಣೇಶ ಸೂಡಂಬಿ, ಇತರರು ಪಾಲ್ಗೊಂಡಿದ್ದರು.