

ಹಾವೇರಿ: ಪ್ರತಿ ಟನ್ ಕಬ್ಬಿಗೆ 3,500 ರೂ. ನ್ಯಾಯಯುತ ದರ ನಿಗದಿ, ಕಬ್ಬಿನ ರಿಕವರಿ(ಇಳುವರಿ)ಯಲ್ಲಿ ಆಗುತ್ತಿರುವ ಮೋಸ ತಡೆಗಟ್ಟುವುದು ಹಾಗೂ ಸರ್ಕಾರಿ ತೂಕದ ಯಂತ್ರಗಳನ್ನು ಕಾರ್ಖಾನೆಗಳಲ್ಲಿ ಅಳವಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ರಾಜ್ಯ ಸರ್ಕಾರ ಹಾಗೂ ಸಕ್ಕರೆ ಖಾತೆ ಸಚಿವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಜಿಲ್ಲೆಯಲ್ಲಿರುವ ಮೂರು ಸಕ್ಕರೆ ಕಾರ್ಖಾನೆಗಳು ಉತ್ತರ ಕರ್ನಾಟಕ ವ್ಯಾಪ್ತಿಗೆ ಬರುತ್ತವೆ. ಕಬ್ಬಿನ ರಿಕವರಿ (ಇಳುವರಿ) 1986ರಿಂದ 2006ರವರೆಗೆ ಶೇ.10.5ರಿಂದ 11.5 ಇದ್ದು, ಇದೀಗ ಶೇ.9.42ರಷ್ಟು ತೋರಿಸುತ್ತಿದ್ದಾರೆ. ರಿಕವರಿ ನೆಪದಲ್ಲಿ ಕಾರ್ಖಾನೆಗಳು ರೈತರಿಗೆ ಮೋಸ ಮಾಡುತ್ತಿವೆ. ಪಕ್ಕದ ಹಳಿಯಾಳದಲ್ಲಿ ಕಬ್ಬು ಕಟಾವು, ಸಾಗಾಣಿಕೆ ವೆಚ್ಚವನ್ನು ಕಾರ್ಖಾನೆಯವರೇ ಭರಿಸಿ ಪ್ರತಿಟನ್ ಕಬ್ಬಿಗೆ 3,200 ರೂ. ಕೊಡಲು ಒಪ್ಪಿದ್ದಾರೆ. ಅಲ್ಲದೇ ಜಿಲ್ಲೆಯ ಕಾರ್ಖಾನೆಯವರೇ ಕಲಘಟಗಿ ಕಬ್ಬು ಬೆಳೆಗಾರರಿಗೆ 3,200 ರೂ. ಕೊಡುತ್ತಿದ್ದಾರೆ. ಆದರೆ, ಹಾವೇರಿ ಜಿಲ್ಲೆ ರೈತರಿಗೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಕ್ಕರೆ ಸಚಿವ ಶಿವಾನಂದ ಪಾಟೀಲರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಈವರೆಗೂ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸಿಲ್ಲ. ಕನಿಷ್ಠಪಕ್ಷ ಒಂದು ಸಭೆಯನ್ನು ಆಯೋಜನೆ ಮಾಡಿಲ್ಲ. ಸಚಿವರು ಕಬ್ಬು ಬೆಳೆಗಾರರ ವಿರೋಧಿಯಾಗಿದ್ದಾರೆ ಎಂದು ಕಿಡಿಕಾರಿದರು. ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಕಟಾವು ಮತ್ತು ಸಾಗಾಣಿಕೆ ವೆಚ್ಚ ಭರಿಸಿ ಪ್ರತಿಟನ್ ಕಬ್ಬಿಗೆ 3,500 ರೂ. ಎಫ್‌ಆರ್‌ಪಿ ದರ ನಿಗದಿ ಮಾಡಬೇಕು. ಕಾರ್ಖಾನೆಗಳಲ್ಲಿ ರಿಕವರಿ ಲ್ಯಾಬ್ ಹಾಗೂ ಸರ್ಕಾರಿ ಕಬ್ಬಿನ ತೂಕದ ಯಂತ್ರವನ್ನು ಅಳವಡಿಸಬೇಕು. ರೈತರಿಗೆ ಅನ್ಯಾಯವಾಗದಂತೆ 3,500 ದರವನ್ನು ಕೊಡಬೇಕು. ಇಲ್ಲದಿದ್ದರೆ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಕಬ್ಬು ಬೆಳೆಗಾರರ ಸಂಘ ಹಾಗೂ ರೈತರು ಒಗ್ಗೂಡಿಕೊಂಡು ದೊಡ್ಡ ಪ್ರಮಾಣದ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ರೈತರು ಬಹಳಷ್ಟು ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಕಾರ್ಖಾನೆಯ ಮಾಲೀಕರು ಮತ್ತು ಜನಪ್ರತಿನಿಗಳು ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಸರ್ಕಾರ ಕೂಡ ರೈತರ ಬೇಡಿಕೆ ಮತ್ತು ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಒಂದುವೇಳೆ ರೈತರಿಗೆನಾದರೂ ತೊಂದರೆ ಮಾಡಿದರೆ ಬಹಳ ಅನಾನುಕೂಲ ಎದುರಿಸಬೇಕಾಗುತ್ತದೆ. ರೈತರು ತಮ್ಮ ನೋವುಗಳನ್ನು ಬದಿಗೊತ್ತಿ ಜನರ ಒಳಿತಿಗಾಗಿ ದುಡಿಯುತ್ತಾರೆ. ಅಂಥವರ ಬೇಡಿಕೆಗೆ ನ್ಯಾಯಯುತ ದರ ನೀಡುವ ಮೂಲಕ ಸರ್ಕಾರ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಕಬ್ಬಿನ ಇಳುವರಿಯನ್ನು ರೈತರ ಸಮ್ಮುಖದಲ್ಲೇ ಮಾಡುವಂತೆ ಕಾರ್ಖಾನೆಯವರಿಗೆ ತಿಳಿಸುತ್ತೇವೆ. ಇಲ್ಲವಾದರೆ ನೀವೇ 500 ರೂ. ಬೆಲೆಬಾಳುವ ರಿಪ್ಲೆಕ್ಟಿವ್ ಮೀಟರ್ ತೆಗೆದುಕೊಂಡು ಬಂದರೆ ಅಲ್ಲಿಯೇ ಇಳುವರಿ ಪರೀಕ್ಷೆ ನಡೆಸಲಾಗುವುದು. ಜತೆಗೆ ಕಟಾವು ಮಾಡುವ ಗ್ಯಾಂಗ್‌ಅನ್ನು ನಿಯಂತ್ರಣದಲ್ಲಿ ಇರಿಸಿಕೊಂಡರೆ ಮಾತ್ರ ರೈತರಿಗೆ ನ್ಯಾಯ ಸಿಗುತ್ತದೆ ಎಂದರು. ಆದರೂ ಸರ್ಕಾರದ ಮಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ಬೆಳಗಾವಿ, ಬಾಗಲಕೋಟೆ ರೈತರ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಾಗಿ, ಅದೇ ದರವನ್ನು ಜಿಲ್ಲೆಯ ರೈತರಿಗೂ ಕೊಡಿಸುವಂತೆ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಅಕ್ಕಿಆಲೂರಿನ ಚನ್ನವೀರೇಶ್ವರ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಹೇರೂರಿನ ಗುಬ್ಬಿ ನಂಜುಂಡೇಶ್ವರ ಸ್ವಾಮೀಜಿ, ತೆಲಂಗಾಣದ ವಿರೂಪಾಕ್ಷ ದೇವರು, ಹೊಳಲಿನ ಮಲ್ಲಿಕಾರ್ಜುನ ಸ್ವಾಮೀಜಿ, ರೈತ ಮುಖಂಡರಾದ ಶಿವಬಸಪ್ಪ ಗೋವಿ, ರಾಜಶೇಖರ ಹಲಸೂರ, ಸಂಗಪ್ಪ ಕೂಡಲ, ನಾಗರಾಜ ಸೂರಗೊಂಡ, ಬಸಲಿಂಗಪ್ಪ ನರಗುಂದ, ರುದ್ರಪ್ಪ ಸಂಕಣ್ಣನವರ, ಫಕ್ಕೀರಪ್ಪ ಹುಲ್ಲಾಳ, ಮುತ್ತಪ್ಪ ಗುಡಗೇರಿ, ಈರನಗೌಡ ಪಾಟೀಲ, ರವಿಕುಮಾರ ಸವಣೂರ, ವಿರೂಪಾಕ್ಷಪ್ಪ ಕಲಕೋಟಿ, ಕೆ.ಟಿ ಅರಳಿ, ಶಿವಕುಮಾರಗೌಡ ಪಾಟೀಲ, ಕೋಟ್ರೇಶ ಕಂಟೆಣ್ಣನವರ, ಕಿರಣ ಗಾಣಗೇರ, ಸುರೇಶ ಚಲವಾದಿ, ದಿಳ್ಳೆಪ್ಪ ಮಣ್ಣೂರ, ಹನುಮಂತಪ್ಪ ಕಬ್ಬಾರ, ಸಿದ್ದಲಿಂಗಪ್ಪ ಕಮಡೊಳ್ಳಿ, ರಾಜು ತರ್ಲಘಟ್ಟ, ಸೋಮಣ್ಣ ದೊಡ್ಡಮನಿ, ಶಿವಯೋಗಿ ಹೊಸಗೌಡ್ರ ಸೇರಿದಂತೆ ಅನೇಕರು ಹಾಜರಿದ್ದರು.
ಮಠಾಧೀಶರ ಸಾಥ್
ಕಬ್ಬು ಬೆಳೆಗಾರರ ಪ್ರತಿಭಟನೆಗೆ ಜಿಲ್ಲೆಯ ವಿವಿಧ ಮಠಾಧೀಶರು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಮುಖಂಡರು, ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.