ಹಾವೇರಿಯಲ್ಲಿ 50ಕ್ಕೂ ಹೆಚ್ಚು ಹಿಂದು ಕಾರ್ಯಕರ್ತರ ಬಂಧನ; ಕಬರಸ್ಥಾನದಲ್ಲಿನ ವಾಣಿಜ್ಯ ಮಳಿಗೆ ತೆರವಿಗೆ ಆಗ್ರಹ; ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

28 HVR 3 A
Published on

ಹಾವೇರಿ: ನಗರದ ರೈಲು ನಿಲ್ದಾಣ ರಸ್ತೆಯ ದಾನಮ್ಮ ದೇವಿ ದೇವಸ್ಥಾನದ ಎದುರು ಕಬರಸ್ಥಾನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿರುವುದನ್ನು ಖಂಡಿಸಿ ಮತ್ತು ವಾಣಿಜ್ಯ ಮಳಿಗೆಗಳ ತೆರವಿಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಪ್ರತಿಭಟನೆಗೆ ಮುಂದಾಗಿದ್ದ ಹಿಂದು ಸಂಘಟನೆಗಳ 50ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದರು.

ದಾನಮ್ಮ ದೇವಿ ಗುಡಿ ಎದುರು ಕಬರಸ್ತಾನದಲ್ಲಿ ಅನಧಿಕೃತವಾಗಿ ವಾಣಿಜ್ಯಮಳಿಗೆ ನಿರ್ಮಿಸಲಾಗುತ್ತಿದ್ದು, ಅವುಗಳ ತೆರವಿಗೆ ಆಗ್ರಹಿಸಿ ಶ್ರೀರಾಮಸೇನೆ ನೇತೃತ್ವದಲ್ಲಿ ಸೋಮವಾರ ಪುರಸಿದ್ದೇಶ್ವದ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ರ‌್ಯಾಲಿಗೆ ಕರೆ ನೀಡಲಾಗಿತ್ತು. ಪ್ರತಿಭಟನಾ ರ‌್ಯಾಲಿ ಮೂಲಕ ಹೊಸಮನಿ ಸಿದ್ದಪ್ಪ ವೃತ್ತದ ಮಾರ್ಗವಾಗಿ ನಗರಸಭೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಕರೆ ನೀಡಿದ್ದರು.

ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ಪ್ರತಿಭಟನಾ ರ‌್ಯಾಲಿ ಆರಂಭಿಸಲು ಸಂಘಟಕರು ಸಜ್ಜಾಗುತ್ತಿದ್ದರು. ಈ ವೇಳೆ ಪ್ರತಿಭಟನೆ ಆರಂಭಿಸಲು ಬಿಡದ ಪೊಲೀಸರು ಹಿಂದು ಕಾರ್ಯಕರ್ತರನ್ನು ಬಂಧಿಸಿ, ಕೆರಿಮತ್ತಿಹಳ್ಳಿಯ ಹಳೆಯ ಎಸ್‌ಪಿ ಕಚೇರಿಗೆ ಕರೆದೊಯ್ದರು. ಪೊಲೀಸ್ ವಾಹನದಲ್ಲೇ ಪ್ರತಿಭಟನಾಕರರು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಮಯದ ನಂತರ ಮಧ್ಯಾಹ್ನ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ, ಮುಸ್ಲಿಂ ತುಷ್ಟೀಕರಣದ ವಿರುದ್ಧ ಆಕ್ರೋಶ ಹೊರಹಾಕಿ ಘೋಷಣೆ ಕೂಗಿದರು. ಹಿಂದು ವಿರೋಧಿ ಸರ್ಕಾರದ ನೀತಿಯಿಂದ ಸಾಮಾನ್ಯ ವರ್ಗದ ಜನರು ಬದುಕು ಕಷ್ಟಕರವಾಗಿದೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ಸಿದ್ದರಾಜ ಕಲಕೋಟಿ, ಜಗದೀಶ ಬಸೇಗಣ್ಣಿ, ಕಿರಣ ಕೊಳ್ಳಿ, ಗವಿಸಿದ್ದಪ್ಪ ದ್ಯಾಮಣ್ಣನವರ, ವಿಜಯಕುಮಾರ ಚಿನ್ನಿಕಟ್ಟಿ, ಪ್ರಭು ಹಿಟ್ನಳ್ಳಿ, ಶಂಭಣ್ಣ ಜತ್ತಿ, ಕೆ.ಸಿ.ಪಾವಲಿ, ನಿರಂಜನ ಹೆರೂರ, ಸಂತೋಷ ಆಲದಕಟ್ಟಿ, ಮುತ್ತಣ್ಣ ಮುಷ್ಠಿ, ಬಸವರಾಜ ಹಾಲಪ್ಪನವರ, ಪ್ರವೀಣ ಶೆಟ್ಟರ್, ಶಿವಯೋಗಿ ಕೊಳ್ಳಿ, ಚನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ, ಗಿರೀಶ ಗುಮಕಾರ, ಅಭಿಷೇಕ ಉಪ್ಪಿನ, ನಾಗರಾಜ ಹರಿಗೋಲ, ಮಹಾಲಿಂಗಸ್ವಾಮಿ ಹಿರೇಮಠ, ಸೇರಿದಂತೆ ಹಲವು ಪಾಲ್ಗೊಂಡಿದ್ದರು.

ವೀರಶೈವ ತರುಣ ಸಂಘ, ಶಿವಶಕ್ತಿ ಯುವಕ ಮಂಡಳಿ, ಸುಭಾಷ್ ಚಂದ್ರ ಭೋಸ್ ಯುವಕ ಮಂಡಳಿ, ಮಾದಿಗ ದಂಡೋರ ಹೋರಾಟ ಸಮಿತಿ, ಹುಕ್ಕೇರಿಮಠ ಅಕ್ಕನ ಬಳಗ, ಲಾರಿ ಮಾಲೀಕರ ಸಂಘ, ಕಿರಾಣಿ ವ್ಯಾಪಾರಸ್ಥರ ಸಂಘ, ಹಿಂದು ಜಾಗರಣ ವೇದಿಕೆ, ವಿಶ್ವ ಹಿಂದು ಪರಿಷತ್, ಬಜರಂಗದಳ, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದವು.

ಪ್ರತಿಭಟನಾ ರ‌್ಯಾಲಿ ತಡೆದ ಪೊಲೀಸರು

ಮೊದಲು 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ನಂತರ 11.30ರ ಸುಮಾರು ಮತ್ತೊಂದು ತಂಡ ನಗರದ ಹುಕ್ಕೇರಿ ಮಠದ ಬಳಿ ಜಮಾವಣೆಗೊಂಡು ಪ್ರತಿಭಟಿಸಲು ಮುಂದಾಗಿತ್ತು. ಡಿವೈಎಸ್‌ಪಿ ಎಂ.ಎಸ್.ಪಾಟೀಲ ನೇತೃತ್ವದ ಪೊಲೀಸರ ತಂಡ 30ಕ್ಕೂ ಅಧಿಕ ಪ್ರತಿಭಟನಾಕಾರರನ್ನು ತಡೆದರು. ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಇಂದು ನಿಮ್ಮ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಅವರನ್ನೂ ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.

ಸ್ವಯಂಪ್ರೇರಿತವಾಗಿ ಬಂದ್

ಹುಕ್ಕೇರಿಮಠ, ಗಾಂಧಿರಸ್ತೆ, ಸುಭಾಸ ವೃತ್ತ, ಸೇರಿದಂತೆ ಪ್ರಮುಖ ಭಾಗದಲ್ಲಿ ದೀಪಾವಳಿ ಹಬ್ಬದ ನಡುವೆಯೂ ಬಹುತೇಕ ವ್ಯಾಪಾರಿಗಳು ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಮುತಾಲಿಕ್‌ಗೆ ನೋಟಿಸ್

ಈ ಮೊದಲು ಪೊಲೀಸರು ಪ್ರತಿಭಟನೆಗೆ ಅನುಮತಿ ಕೊಟ್ಟಿದ್ದರು. ಭಾನುವಾರ ರಾತ್ರಿ ಏಕಾಏಕಿ ರದ್ದುಪಡಿಸಿ, ವಾಟ್ಸ್ ಆ್ಯಪ್‌ಗೆ ಮಾಹಿತಿ ಕಳುಹಿಸಿದರು. ಮುಂಜಾಗ್ರತೆ ಕ್ರಮವಾಗಿ ಪ್ರಮೋದ ಮುತಾಲಿಕ ಅವರಿಗೆ ನೋಟಿಸ್ ಕೊಟ್ಟ ಪೊಲೀಸರು ಧಾರವಾಡದಲ್ಲಿ ಗೃಹ ಬಂಧನದಲ್ಲಿ ಇರಿಸಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದರು.

ಕಬರಸ್ತಾನಕ್ಕೆ ಭದ್ರತೆ

ಹಿಂದುಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾನುವಾರದಿಂದಲೇ ಕಬರಸ್ತಾನ ಹಾಗೂ ದರ್ಗಾಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net